ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಾದ್ಯಂತ ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣದ ಜೊತೆಗೆ ಆಗಾಗ್ಗೆ ಬೀಳುತ್ತಿರುವ ತುಂತುರು ಮಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರೇಷ್ಮೆಹುಳುಗಳಿಗೆ ಹಾಲುತೊಂಡೆ ರೋಗ ಕಾಡುವ ಆತಂಕ ಎದುರಾಗಿದೆ. ಈ ರೋಗಕ್ಕೆ ತುತ್ತಾದ ಹುಳುಗಳು, ಹಣ್ಣಾಗುವ ಬದಲು ಹಾಲುವಾಂತಿ ಮಾಡಿಕೊಂಡು ಸಾಯುತ್ತವೆ ಎಂದು ರೇಷ್ಮೆ ಬೆಳೆಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
“ಕಳೆದ ಒಂದು ವಾರದಿಂದ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಸಂಜೆಯ ವೇಳೆ ಹೆಚ್ಚು ತಂಪಾದ ವಾತಾವರಣ ಇರುತ್ತದೆ. ಹಗಲಿನಲ್ಲಿ ಮೋಡ ಮುಸುಕಿದ ವಾತಾವರಣದೊಂದಿಗೆ ತುಂತುರು ಮಳೆ ಹನಿಗಳು ನಿರಂತರವಾಗಿ ಬೀಳುತ್ತಿವೆ. ಇದರಿಂದಾಗಿ ರೇಷ್ಮೆಹುಳು ಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶ ಕಾಪಾಡಿಕೊಳ್ಳುವುದು ಹಾಗೂ ರೇಷ್ಮೆಹುಳುಗಳಿಗೆ ತೇವಾಂಶರಹಿತವಾದ ಸೊಪ್ಪು ಕೊಡುವುದು ಸವಾಲಾಗಿ ಪರಿಣಮಿಸಿದೆ” ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
“ಹಿಪ್ಪುನೇರಳೆ ಸೊಪ್ಪಿನಲ್ಲಿ ನೀರು ಇರುವ ಕಾರಣ, ತೋಟಗಳಲ್ಲಿ ನೀರು ಉದುರಿಸಿದ ನಂತರ ಕಟಾವು ಮಾಡಿಕೊಂಡು ಬಂದು ಹುಳುಗಳಿಗೆ ಕೊಡುತ್ತಿದ್ದಾರೆ. ಆದರೂ ಸೊಪ್ಪಿನಲ್ಲಿ ನೀರಿನ ಅಂಶ ಹೆಚ್ಚಾಗಿರುವ ಕಾರಣ, ತೇವಾಂಶವಿರುವ ಸೊಪ್ಪು ತಿನ್ನುವ ಹುಳುಗಳು ಹಣ್ಣಾಗುವ ಹಂತದಲ್ಲಿ ಹಾಲುತೊಂಡೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ರೇಷ್ಮೆ ಬೆಳೆಗೆ ಹಾಕಿರುವ ಬಂಡವಾಳ ಬರುತ್ತದೆಯೊ, ಇಲ್ಲವೋ ಎನ್ನುವ ಆತಂಕ ಕಾಡತೊಡಗಿದೆ” ಎಂಬುದು ರೈತರ ಸಂಕಷ್ಟವಾಗಿದೆ.
“ನೂರು ಮೊಟ್ಟೆ ರೇಷ್ಮೆ ಹುಳು ಸಾಕಲು 45 ಮೂಟೆ ಹಿಪ್ಪುನೇರಳೆ ಸೊಪ್ಪು ಬೇಕು. ಇದಕ್ಕೆ ₹30 ಸಾವಿರ ಖರ್ಚು ಮಾಡಬೇಕು. ಆದರೆ, ಈಗಿನ ವಾತಾವರಣಕ್ಕೆ ರೇಷ್ಮೆಹುಳು ಗೂಡು ಕಟ್ಟುತ್ತಿಲ್ಲ. ಹುಳು ಹಣ್ಣಾದ ನಂತರ 5ರಿಂದ 6 ದಿನಗಳಿಗೆ ಮಾರುಕಟ್ಟೆಗೆ ಹೋಗಬೇಕು. ಆದರೆ, ಗೂಡುಕಟ್ಟುವುದು ವಿಳಂಬವಾಗುತ್ತಿರುವ ಕಾರಣ, 7ರಿಂದ 8 ದಿನಗಳಾಗುವ ಸಾಧ್ಯತೆ ಇದೆ. ರೇಷ್ಮೆ ಹುಳು ಸಾಕಲು ಹಾಕಿದ ಬಂಡವಾಳ ಕೈಗೆ ಬರುತ್ತಿಲ್ಲ” ಎಂದು ರೈತರು ಅವಲತ್ತುಕೊಂಡಿದ್ದಾರೆ.
“ಎರಡು ದಿನಗಳಿಂದ ಹಣ್ಣಾಗಿರುವ ರೇಷ್ಮೆಹುಳುಗಳು ಸರಿಯಾಗಿ ಗೂಡು ಕಟ್ಟುತ್ತಿಲ್ಲ. ಗೂಡಿನ ಇಳುವರಿಯೂ ಕುಂಠಿತವಾಗುತ್ತಿದೆ. ರೈತರು ಹಣ್ಣಾಗಿರುವ ಹುಳುಗಳನ್ನು ಚಂದ್ರಿಕೆಗಳಿಗೆ ಹಾಕಿ ವಿದ್ಯುತ್ ದೀಪ ಹಚ್ಚಿ ಶೆಡ್‌ಗಳಲ್ಲಿ ಜೋಡಿಸಿಟ್ಟು ಗೂಡುಕಟ್ಟುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಮೋಡದ ವಾತಾವರಣದಲ್ಲಿ ಕಟ್ಟಿರುವ ಗೂಡನ್ನು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ. ಈ ವಾತಾವರಣವೂ ರೇಷ್ಮೆ ಬೆಳೆಗಾರರಿಗೆ ಅನುಕೂಲಕರವಾಗಿಲ್ಲ” ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಭೀಮ ಆರ್ಮಿ ಒತ್ತಾಯ
ಇದೇ ವಾತಾವರಣ ಇನ್ನೂ ಮೂರ್ನಾಲ್ಕು ದಿನ ಮುಂದುವರೆದರೆ ಹುಳುಗಳಲ್ಲಿ ಸುಣ್ಣಕಟ್ಟು ರೋಗವೂ ಕಾಣಿಸಿಕೊಳ್ಳಲಿದೆ. ಈ ರೋಗ ಬಂದ ರೇಷ್ಮೆ ಹುಳುಗಳು ಸೊಪ್ಪು ತಿನ್ನದೆ ಚಟುವಟಿಕೆ ಕಳೆದುಕೊಂಡು ಸಾಯುತ್ತವೆ. ಸತ್ತ ಹುಳುವಿನ ದೇಹವು ಗಟ್ಟಿಯಾಗಿ ಮೈಮೇಲೆ ಬಿಳಿಯ ಪೌಡರ್ ರೂಪದಲ್ಲಿ ವೈರಾಣುಗಳು ಉತ್ಪತ್ತಿಯಾಗುತ್ತಿವೆ. ಹೀಗೆ ಉತ್ಪತ್ತಿಯಾದ ವೈರಾಣುಗಳು ಗಾಳಿಯ ಮೂಲಕ ಆರೋಗ್ಯವಂತ ಹುಳುವಿಗೆ ತಾಕುವುದರಿಂದ ಎಲ್ಲ ಹುಳುಗಳು ಸುಣ್ಣಕಟ್ಟು ರೋಗಕ್ಕೆ ತುತ್ತಾಗುತ್ತವೆ ಎನ್ನಲಾಗಿದೆ.