ಮಹಿಳೆಯರ ಆರ್ಥಿಕ ಸಬಲೀಕರಣವೇ ನಿಗಮದ ಮುಖ್ಯ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪದ್ಮಾವತಿ ಜಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ, ಮಹಿಳಾ ಉದ್ದಿಮೆದಾರರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಇತರೆ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರವು ಹತ್ತಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಅಧಿಕಾರಿಗಳು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ಅಧಿಕಾರಿಗಳು ಕೆಲಸ ಮಾಡಬೇಕು” ಎಂದು ಹೇಳಿದರು.
“ದಮನಿತರು, ಧ್ವನಿ ಇಲ್ಲದವರು, ಬಡವರು, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ಯೋಜನೆಗಳು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಸ್ತ್ರೀಶಕ್ತಿ ಸಂಘಗಳು, ಇತರೆ ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಅರ್ಥಿಕವಾಗಿ ಸಬಲೆಯರನ್ನಾಗಿ ಮಾಡುವುದು ನಿಗಮದ ಗುರಿಯಾಗಿದೆ” ಎಂದು ಹೇಳಿದರು.
“ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಹಾರ ಪಡಿತರ ಚೀಟಿ ವಿತರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
“ಮಹಿಳೆಯರಿಗಾಗಿ ಸರ್ಕಾರ ತಂದಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗಳಲ್ಲಿ ಪಡೆದುಕೊಳ್ಳಬಹುದಾಗಿದ್ದು, ಉದ್ಯೋಗಿನಿ, ಸಂಜೀವಿನಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಅಮೃತ ಯೋಜನೆ, ಸಮೃದ್ಧಿ ಯೋಜನೆಗಳಡಿ ಸಾಲ ಸೌಲಭ್ಯ, ಸಹಾಯಧನ ಸೇರಿದಂತೆ ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳು ಇವೆ. ಮಹಿಳೆಯರು ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ” ಎಂದರು.
ಮಹಿಳಾ ಉದ್ದಿಮೆದಾರರೊಂದಿಗೆ ಸಂವಾದ ನಡೆಸಿ ಕುಂದುಕೊರತೆ ಆಲಿಸಿ, ಉದ್ದಿಮೆಗಳ ಬಗೆಗಿನ ಅಭಿಪ್ರಾಯ ಪಡೆದುಕೊಂಡರು ಹಾಗೂ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆನ್ವರಿ ಶಾಲೆಯ ಮೇಲ್ಛಾವಣಿ ಕುಸಿತ; ಪ್ರಕರಣ ದಾಖಲಿಸಲು ಎಸ್ಎಫ್ಐ ಒತ್ತಾಯ
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಅಭಿವೃದ್ದಧಿ ಇಲಾಖೆಯ ಜಂಟಿ ನಿರ್ದೇಶಕಿ ಅಕ್ಕಮಹಾದೇವಿ, ಜಿ ಪಂ ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುದ್ದಣ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನಿತಾ ಲಕ್ಷ್ಮಿ, ನಿಗಮದ ಅಭಿವೃದ್ಧಿ ನಿರೀಕ್ಷಕ ವಿಜಯ ಕುಮಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ ಜೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಸಿಡಿಪಿಒಗಳು, ಜಿಲ್ಲಾ ಮಹಿಳಾ ಅಭಿವೃದ್ಧಿ ಘಟಕ ಸಿಬ್ಬಂದಿ ಹಾಗೂ ಇತರರು ಇದ್ದರು.