ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಹಲವೆಡೆ ಪದೇ ಪದೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಚಂದಾಪುರ ಸಮೀಪದ ಹೀಲಲಿಗೆ ಬಳಿ ಶನಿವಾರ ಚಿರತೆ ಕಂಡುಬಂದಿದ್ದು, ಚಿರತೆ ಓಡಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಳೆದ ಎರಡು ಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರೂ ಚಿರತೆ ಸೆರೆಹಿಡಿಯಲು ಆಗಿಲ್ಲ. ಇದೀಗ ಹೀಲಲಿಗೆ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಹುಸ್ಕೂರು ಸಮೀಪ ಶುಕ್ರವಾರ ಬೋನಿಟ್ಟು ಚಿರತೆ ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಕೂಡ್ಲು, ಗಟ್ಟಹಳ್ಳಿ, ಹುಸ್ಕೂರು, ಗೋಪಸಂದ್ರ ಸಮೀಪ ಚಿರತೆ ಓಡಾಟ ಆತಂಕ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಎಸ್‌ಸಿ/ಎಸ್‌ಟಿ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ
ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಓಡಾಟದ ಬಗ್ಗೆ ಎಚ್ಚರ ವಹಿಸಿದ್ದು, ಸಾರ್ವಜನಿಕರು, ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ಹೀಲಲಿಗೆ, ಗೋಪಸಂದ್ರ, ಹುಸ್ಕೂರು ಗ್ರಾಮಗಳ ಜನತೆಯಲ್ಲಿ ರಾತ್ರಿ ವೇಳೆಯೂ ಜಾಗೃತಿ ಮೂಡಿಸುತ್ತಿದ್ದಾರೆ.