ಮಹದೇವಪುರ ವಲಯದ ಬಸವನಪುರ, ವರ್ತೂರು ಕೆರೆಗಳಿಗೆ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ಕೆರೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಳೆದ 3-4 ದಿನಗಳಿಂದ ಕೆರೆಯ ಒಳಹರಿವಿನ ಬಳಿ ಇರುವ ಯುಜಿಡಿ ಚೇಂಬರ್‌ನಲ್ಲಿ ಯುಜಿಡಿ ನೀರು ಕೆರೆಗೆ ಸೇರುತ್ತಿದೆ. ಇದರಿಂದ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಯುಜಿಡಿ ಲೈನ್ ಬ್ಲಾಕ್ ಆಗಿರುವುದು ಮತ್ತು ನೀರು ತುಂಬಿ ಹರಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೆರೆಯ ನೀರಿನ ಬಣ್ಣ ಬದಲಾಗಿದೆ. ಕೊಳಚೆ ನೀರು ಕೆರೆಗೆ ಸೇರುತ್ತಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ. ಈಗಾಗಲೇ ಕೆರೆಯ ಮೇಲೆ ಸತ್ತ ಮೀನುಗಳು ತೇಲುತ್ತಿರುವುದನ್ನು ಕಾಣಬಹುದು” ಎಂದು ಕೆರೆ ಕಾರ್ಯಕರ್ತ ಬಾಲಾಜಿ ರಘೋತ್ತಮ್ ಬಾಲಿ ತಿಳಿಸಿದರು.
“ಇದು ಹೀಗೆ ಮುಂದುವರೆದರೆ ಕೆರೆಯಲ್ಲಿರುವ ಮೀನುಗಳು 2-3 ದಿನಗಳಿಗಿಂತ ಹೆಚ್ಚು ಕಾಲ ಬದುಕುಳಿಯುವುದಿಲ್ಲ. ಕೆರೆಯಲ್ಲಿರುವ ಸಂಪೂರ್ಣ ಮೀನುಗಳು ಸಾವನ್ನಪ್ಪುತ್ತವೆ. 13 ವರ್ಷಗಳ ಹೋರಾಟದ ನಂತರ, ಕೆರೆಯನ್ನು ನವೀಕರಿಸಲಾಯಿತು. ಆದರೆ, ಇಂತಹ ಮಾಲಿನ್ಯದ ಘಟನೆಗಳು ನಿಜವಾಗಿಯೂ ನೋವುಂಟು ಮಾಡುತ್ತವೆ” ಎಂದು ಹೇಳಿದರು.
”ಮಳೆ ಬಂದಾಗ ಸ್ವಯಂಚಾಲಿತವಾಗಿ ಕೊಳಚೆ ನೀರು ಕೆರೆ ಸೇರುತ್ತದೆ. ಭಾರೀ ಮಳೆಯಾದರೆ, ನೀರು ಚಲಿಸುತ್ತಲೇ ಇರುತ್ತದೆ. ಶುದ್ಧ ನೀರಿನೊಂದಿಗೆ ಕೊಳಚೆ ನೀರು ಸೇರಿಕೊಳ್ಳುತ್ತದೆ. ಯುಜಿಡಿ ಚೇಂಬರ್ ಸಮಸ್ಯೆಯಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಮೂಲಕ ಕೊಳಚೆ ನೀರು ಕೆರೆಗೆ ಸೇರದಂತೆ ಸರಿಪಡಿಸಬೇಕಾಗಿದೆ. ನಾವು ಆಗಾಗ ಹೋಗಿ ಕೆರೆಯನ್ನು ಸ್ವಚ್ಛಗೊಳಿಸುತ್ತೇವೆ. ಆದರೆ, ಇಂತಹ ಸಂಗತಿಗಳು ಸಾಮಾನ್ಯ” ಎಂದು ಕೆರೆ ನಿರ್ವಹಣೆ ಗುತ್ತಿಗೆದಾರರೊಬ್ಬರು ತಿಳಿಸಿದರು
ವರ್ತೂರು ಕೆರೆಯಲ್ಲಿ ಕೆಲವು ದಿನಗಳ ಹಿಂದೆ ತಿರುವು ಕಾಲುವೆ ಒಡೆದಿದ್ದರಿಂದ ಮೇಲ್ದಂಡೆಯ ಕೊಳಚೆ ನೀರು ಕೆರೆಗೆ ಸೇರುತ್ತಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಅಗ್ನಿ ಅವಘಡ ಪರಿಶೀಲನೆ; ಇಲ್ಲಿಯವರೆಗೂ 48 ರೆಸ್ಟೋರೆಂಟ್ ಬಂದ್
“ವರ್ತೂರು, ಬೆಳ್ಳಂದೂರು ಕೆರೆಗಳ ರಕ್ಷಣೆಗಾಗಿ 20 ವರ್ಷಗಳಿಂದ ನಾಗರಿಕರು ಹೋರಾಟ ನಡೆಸುತ್ತಿದ್ದಾರೆ. ಕೆರೆಗಳನ್ನು ಮರುಸ್ಥಾಪಿಸಲು ನಮ್ಮ ಹೋರಾಟದ ಹೊರತಾಗಿಯೂ ಕಲುಷಿತವಾಗುತ್ತಿರುವುದನ್ನು ನೋಡುವುದು ತುಂಬಾ ಬೇಸರ ತಂದಿದೆ. ಇತ್ತೀಚೆಗೆ ಕೆರೆ ಒಡೆದ ಕಾರಣ ಕೊಳಚೆ ನೀರು ಕೆರೆಗೆ ನುಗ್ಗಿ ಸಾಕಷ್ಟು ಮೀನುಗಳು ಸಾವನ್ನಪ್ಪಿವೆ. ಡೈವರ್ಶನ್ ಚಾನಲ್ ಅನ್ನು ಸರಿಪಡಿಸಲು ಕನಿಷ್ಠ ಒಂದು ವಾರದ ಸಮಯ ಬೇಕಾಯಿತು” ಎಂದು ಕೆರೆ ಹೋರಾಟಗಾರ ಜಗದೀಶರೆಡ್ಡಿ ತಿಳಿಸಿದರು.