ಸಾಹಿತಿ ದೇವನೂರ ಮಹಾದೇವ ಅವರ ʼಎದೆಗೆ ಬಿದ್ದ ಅಕ್ಷರʼ ಪಾಠವನ್ನು ಪಠ್ಯಪುಸ್ತಕಕ್ಕೆ ಸೇರಿಸಬೇಕು ಎಂದು ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಆಗ್ರಹಿಸಿದೆ.
“ರಾಜ್ಯ ಸರ್ಕಾರ ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೆಲವು ಪಾಠಗಳನ್ನು ಸೇರ್ಪಡೆ ಮಾಡಲು ಸಮಿತಿ ರಚಿಸಿರುವುದನ್ನು ಎಸ್‌ಎಫ್‌ಐ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ” ಎಂದು ತಿಳಿಸಿದೆ.
“ಕಳೆದ ವರ್ಷ ಬಿಜೆಪಿ ಸರ್ಕಾರ ಕೈ ಬಿಟ್ಟಿರುವ ಬಹುತೇಕ ಎಲ್ಲ ಪಾಠಗಳನ್ನು ಕಾಂಗ್ರೆಸ್ ಸರ್ಕಾರ ಮರುಸೇರ್ಪಡೆ ಮಾಡುತ್ತಿದೆ. ಆದರೆ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ ಭಾಗದಲ್ಲಿ ರಾಜ್ಯದ ಹಿರಿಯ ಸಾಹಿತಿ ದೇವನೂರ ಮಹಾದೇವರ ʼಎದೆಗೆ ಬಿದ್ದ ಅಕ್ಷರʼ ಎಂಬ ಪಾಠವು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ತಿದ್ದುಪಡಿ ಅಥವಾ ಸೇರ್ಪಡೆ ಪಟ್ಟಿಯಲ್ಲಿ ಇಲ್ಲದಿರುವುದು ನೋವಿನ ವಿಷಯವಾಗಿದೆ” ಎಂದು ಎಸ್‌ಎಫ್‌ಐ ಬೇಸರ ವ್ಯಕ್ತಪಡಿಸಿದೆ.
ಈ ಸುದ್ದಿ ಓದಿದ್ದೀರಾ? ಅಸಲಿ ಹಿಂದುತ್ವಕ್ಕೆ ‘ಶಕ್ತಿ ಯೋಜನೆ’ ಶಕ್ತಿ ತುಂಬಿದೆ: ಸಚಿವ ರಾಮಲಿಂಗಾ ರೆಡ್ಡಿ
“ಎದೆಗೆ ಬಿದ್ದ ಅಕ್ಷರ ಪಾಠವು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಕೋಮುವಾದದ ವಿರುದ್ಧ ದೇವನೂರ ಮಹಾದೇವ ಅವರು ಬಹಿರಂಗವಾಗಿ ಪ್ರತಿಭಟನೆ ಮಾಡಿದ್ದರು. ಹಾಗೂ ಎದೆಗೆ ಬಿದ್ದ ಅಕ್ಷರದ ಭಾಗವನ್ನು ಗದ್ಯಭಾಗದಲ್ಲಿ ಪ್ರಕಟಿಸಲು ನೀಡಿದ್ದ ಅನುಮತಿ ಹಿಂಪಡೆದಿದ್ದರು. ಆದರೆ, ಈಗ ಮುಖ್ಯಮಂತ್ರಿ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವರು ಇದರ ಬಗ್ಗೆ ಗಮನಹರಿಸಿ 10ನೇ ತರಗತಿ ಕನ್ನಡ ಪ್ರಥಮ ಭಾಷೆ ವಿಷಯದಲ್ಲಿ ಅವರ ಪಾಠ ಸೇರಿಸಬೇಕು” ಎಂದು ಆಗ್ರಹಿಸಿದೆ.