ಬಿಬಿಎಂಪಿ ವ್ಯಾಪ್ತಿಯಲ್ಲಿ ಯುವಮತದಾರರ ವಿಶೇಷ ನೋಂದಣಿ ಅಭಿಯಾನ ಡಿಸೆಂಬರ್ 2ರಿಂದ ಆರಂಭವಾಗಿದ್ದು, ಎಲ್ಲ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ವಾರ್ಡ್ ಕಚೇರಿಗಳು, ಮತಗಟ್ಟೆಗಳಲ್ಲಿ ಅಭಿಯಾನ ಆಯೋಜಿಸಿವೆ.
ಬೂತ್ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು, ನೋಂದಣಿ ಮಾಡಿಕೊಳ್ಳುವುದರ ಜೊತೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನೂ ಸ್ವೀಕರಿತ್ತಿದ್ದಾರೆ. ಸ್ಥಳಗಳಿಗೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಹಂಕ, ಶೇಷಾದ್ರಿಪುರಂ ಕಾಲೇಜಿನಲ್ಲಿ ವಿಶೇಷ ನೋಂದಣಿ ಅಭಿಯಾನದ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
“ಯುವ ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವುದರ ಜೊತೆಗೆ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಪ್ರೇರೇಪಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಜಿಲ್ಲಾ ಚುನಾವಣಾ ಕಚೇರಿಯಿಂದ ನಗರದ ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ. 18 ವರ್ಷ ತುಂಬುವ ಎಲ್ಲರೂ ಆನ್‌ಲೈನ್ ಮುಖಾಂತರ ಸ್ವಯಂ ಪ್ರೇರಿತವಾಗಿ ನೋಂದಾಯಿಸಿಕೊಳ್ಳಬಹುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಾಲ್ಕು ರಾಜ್ಯಗಳಲ್ಲಿ ಫಲಿತಾಂಶ – ಬಿಜೆಪಿ ಮುನ್ನಡೆ: ವಿಪಕ್ಷ ನಾಯಕ ಆರ್ ಅಶೋಕ್
“2024ರ ಜನವರಿ 1ಕ್ಕೆ 18 ವರ್ಷ ತುಂಬುವ ಎಲ್ಲ ಯುವ ಮತದಾರರು ಮತಗಟ್ಟೆಗಳಿಗೆ ತೆರಳಿ ಫಾರಂ-6ನ್ನು ಭರ್ತಿ ಮಾಡಿ ಸಲ್ಲಿಸಬೇಕು. ವೆಬ್ ಪೋರ್ಟಲ್ voters.eci.gov.in ಅಥವಾ Voter Helpline ಮೊಬೈಲ್ ಆ್ಯಪ್ ಮೂಲಕ ಸ್ವಯಂ ಪ್ರೇರಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ” ಎಂದು ತಿಳಿಸಿದ್ದಾರೆ.