ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಟ್ರಾಫಿಕ್ ನಿಯಂತ್ರಣಕ್ಕೆ ತರಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದೀಗ ಅಕ್ಟೋಬರ್ 9ರಿಂದ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರ ಆರಂಭಿಸಲಾಗಿದೆ. ಈ ಬೆನ್ನಲ್ಲೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸ ಮೆಟ್ರೋ ಫೀಡರ್ ಬಸ್ ಸೇವೆ ಆರಂಭಿಸಿದೆ.
ಬೆಂಗಳೂರಿನಲ್ಲಿರುವ ವಾಹನ ಸಂಚಾರ ದಟ್ಟಣೆ ಸಮಸ್ಯೆಯು ಅಂತಾರಾಷ್ಟೀಯ ಮಟ್ಟದಲ್ಲಿ ಸದ್ದು ಮಾಡಿದೆ. ನಿತ್ಯ ಕೆಲಸಕ್ಕೆ ತೆರಳುವವರು, ಶಾಲಾ-ಕಾಲೇಜುಗಳಿಗೆ ತೆರಳುವವರು ಈ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ.
ಬೆಂಗಳೂರಿನಲ್ಲಿ ಕೇವಲ 10 ಕಿಲೋ ಮೀಟರ್ ಪ್ರಯಾಣ ಮಾಡುವುದಕ್ಕೆ ಗಂಟೆಗಟ್ಟಲೆ ಸಮಯ ತೆಗೆದುಕ್ಕೊಳ್ಳುತ್ತಿದೆ. ಇತ್ತೀಚೆಗೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ, ಲಕ್ಷಾಂತರ ಜನ ತಮ್ಮ ಊರುಗಳಿಗೆ ತೆರಳಲು ಒಮ್ಮೆಲೆ ರಸ್ತೆಗೆ ಇಳಿದಿದ್ದರು. ಈ ವೇಳೆ 8 ಕಿ.ಮೀ ಕ್ರಮಿಸಲು ಬರೋಬ್ಬರಿ 3 ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್‌ನಲ್ಲಿ ಸಿಲುಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೆಂಗಳೂರಿನಲ್ಲಿ ಪ್ರತಿನಿತ್ಯ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಮೆಟ್ರೊ, ಬಿಡಿಎ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ ಹಾಗೂ ಕೊವೀಡ್ ಸಮಯದಲ್ಲಿ ಲಾಕಡೌನ್‌ನಿಂದ ಹಲವು ಜನ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರು. ಇದೀಗ ಎಲ್ಲ ಐಟಿ ಉದ್ಯೋಗಿಗಳು ಕಚೇರಿಗಳ ಕಡೆಗೆ ಆಗಮಿಸುತ್ತಿದ್ದಾರೆ. ಅಲ್ಲದೆ, ನಗರದಲ್ಲಿರುವ ಬಹುತೇಕರು ಸ್ವಂತ ವಾಹನ ತೆಗೆದುಕೊಂಡು ರಸ್ತೆಗೆ ಇಳಿಯುತ್ತಿದ್ದಾರೆ. ಇದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ.
ಈ ಹಿನ್ನೆಲೆ, ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇದೀಗ ನೇರಳೆ ಮಾರ್ಗದ ಮೆಟ್ರೋ ಆರಂಭವಾದ ಬೆನ್ನಲ್ಲೇ, ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿಎಂಟಿಸಿ ನೂತನ ಮೆಟ್ರೋ ಫೀಡರ್ ಸೇವೆ ಆರಂಭಿಸಿದೆ.
ನೂತನ ಮೆಟ್ರೋ ಫೀಡರ್ ಮಾರ್ಗಕ್ಕೆ ಬಿಎಂಟಿಸಿ 38 ಹೆಚ್ಚುವರಿ ಬಸ್ ಸೇವೆಯನ್ನು ಆರಂಭಿಸಿದೆ. ಕೆ.ಆರ್.ಪುರ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕಾಡುಗೋಡಿಯಿಂದ ಮಾರತ್ತಳ್ಳಿಯವರೆಗೆ ಎಸಿ, ನಾನ್ ಎಸಿ, ಬಿಎಂಟಿಸಿ ಬಸ್ ಸೇವೆ ಆರಂಭಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಿಯತಮೆ ಖಾಸಗಿ ಫೋಟೋ ಹರಿಬಿಟ್ಟು, ಪೊಲೀಸರಿಗೆ ದೂರು ಕೊಟ್ಟಿದ್ದ ದುರುಳನ ಬಂಧನ
- ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಿಂದ ಮಹದೇವಪುರ, ಮಾರತ್ ಹಳ್ಳಿ ಬಿಡ್ಜ್, ಕಾಡು ಬೀಸನಹಳ್ಳಿ, ಅಗರ ಮಾರ್ಗವಾಗಿ ಸೆಂಟ್ರಲ್ ಸಿಲ್ಕ್ ಬೊರ್ಡ್‌ಗೆ ತೆರಳಲಿದೆ. (ಮಾರ್ಗ ಸಂಖ್ಯೆ-ವಿ-ಎಂಎಫ್-1ಸಿ)
- ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಿಂದ ಮಹದೇವಪುರ, ಕುಂದಲಹಳ್ಳಿ ಗೇಟ್, ಗ್ರಾಫೈಟ್ ಇಂಡಿಯಾ, ಗರುಡಾಚಾರ್‌ಪಾಳ್ಯ ಮಾರ್ಗವಾಗಿ ಮತ್ತೆ ಕೆ.ಆರ್.ಪುರಂ ಮೆಟ್ರೋ ನಿಲ್ದಾಣ ತಲುಪಲಿದೆ. (ಮಾರ್ಗ ಸಂಖ್ಯೆ- ವಿ-ಎಂಎಫ್-2)
- ಕಾಡುಗೋಡಿಯಿಂದ ಹೋಫ್‌ಫಾರಂ, ಐಟಿಪಿಎಲ್, ಗ್ರಾಫೈಟ್ ಇಂಡಿಯಾ, ಎಇಸಿಎಸ್ ಲೇಔಟ್, ಕುಂದಲಹಳ್ಳಿ ಗೇಟ್ ಮಾರ್ಗವಾಗಿ ಮಾರತ್ ಹಳ್ಳಿ ತಲುಪಲಿದೆ. (ಮಾರ್ಗ ಸಂಖ್ಯೆ-ವಿ-ಎಂಎಫ್-3)
- ಕಾಡುಗೋಡಿಯಿಂದ ಹೋಫ್‌ಫಾರಂ, ಸಿದ್ದಾಪುರ, ವರ್ತೂರ್ ಮಾರ್ಗವಾಗಿ ಮರಳಿ ಮಾರತ್ ಹಳ್ಳಿ ತಲುಪಲಿದೆ. (ಮಾರ್ಗ ಸಂಖ್ಯೆ- ವಿ-ಎಂಎಫ್-4)
ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ
ಸಂಚಾರ ದಟ್ಟಣೆ ಹೆಚ್ಚಳವಾಗುತ್ತಿರುವ ಹಿನ್ನೆಲೆ, ವಾರಕ್ಕೆ ಎರಡು ಬಾರಿಯಾದರೂ ಸಾರ್ವಜನಿಕರ ಸಾರಿಗೆಯನ್ನು ಬಳಸುವಂತೆ ಬಿಎಂಟಿಸಿ ತಿಳಿಸಿದೆ.
ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಚಲ್ಲಘಟ್ಟದವರೆಗಿನ ನೇರಳೆ ಮಾರ್ಗವು ಒಟ್ಟು 43.49 ಕಿಮೀ ಉದ್ದ ಮತ್ತು 37 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ.