ವೈದ್ಯರ ನಿರ್ಲಕ್ಷದಿಂದಾಗಿ ಹತ್ತು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪ್ರೀತಮ್ ನಾಯ್ಕ್(10) ಮೃತ ಬಾಲಕ. ಈತ ಬೆಂಗಳೂರಿನ ಕೋಣನಕುಂಟೆ ನಿವಾಸಿ. ಅ.6ರಂದು ಬಾಲಕ ಪ್ರೀತಮ್‌ಗೆ ಜ್ವರ ಬಂದಿತ್ತು. ಹಾಗಾಗಿ, ಕುಟುಂಬದವರು ಬಾಲಕನನ್ನು ಹತ್ತಿರದ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಇಂಜಕ್ಷನ್ ಮಾಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.
ಮರುದಿನ ಇಂಜಕ್ಷನ್ ನೀಡಿದ ಜಾಗದಲ್ಲಿ ಬಾಲಕನಿಗೆ ಊತ ಮತ್ತು ನೋವು ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ಬಾಲಕನನ್ನು ಮತ್ತೆ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಕೆಲವೊಂದು ಮೆಡಿಸಿನ್ ಮತ್ತು ಟಾನಿಕ್ ಕೊಟ್ಟು ಕಳುಹಿಸಿದ್ದಾರೆ. ಆದರೆ, ಮರುದಿನವೂ ನೋವು ಕಡಿಮೆಯಾಗದೇ ಊತ ಹೆಚ್ಚುತ್ತಾ ಹೋಗಿದೆ. ಇದರಿಂದ ಗಾಬರಿಗೊಂಡ ಪೋಷಕರು ಮತ್ತೆ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ. ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಅ.8 ರಂದು ಸ್ಥಳೀಯ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ. ರಾತ್ರಿ ಹತ್ತು ಗಂಟೆ ಸುಮಾರಿಗೆ ಬಾಲಕನಿಗೆ ಸರ್ಜರಿ ಮಾಡಲಾಗಿದ್ದು, ಈ ವೇಳೆ, ಬಾಲಕನಿಗೆ ಕಿಡ್ನಿ ವೈಫಲ್ಯ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹70 ಕೋಟಿ ಮೌಲ್ಯದ ಸರ್ಕಾರಿ ಜಮೀನು ಭೂ ಒತ್ತುವರಿ ತೆರವು
ನಂತರ ಅ.9ರಂದು ಬಾಲಕನನ್ನು ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲು ಹೋಗುತ್ತಿದ್ದಾಗ ದಾರಿ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಪೋಷಕರು ರಾಜನಂದಿನಿ ಆಸ್ಪತ್ರೆ ವೈದ್ಯರ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಠಾಣೆಯಲ್ಲಿ ಸಿಆರ್‌ಪಿಸಿ (CRPC) 174C ಅಡಿಯಲ್ಲಿ ಪ್ರಕರಣ ದಾಖಲಾಗಿದೆ.