ಭೂಮಿ-ಪ್ರಕೃತಿಯನ್ನು ಆರಾಧಿಸುವ ಮತ್ತು ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಸಲುವಾಗಿಯೇ ಸುಗ್ಗಿ-ಹುಗ್ಗಿ 2025 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂಗಳೂರು ನಗರದ ಜಕ್ಕೂರು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಸುಗ್ಗಿ-ಹುಗ್ಗಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
“ನಾವಿಂದು ಐಟಿ ಸಿಟಿ ಬೆಂಗಳೂರಿನಲ್ಲಿದ್ದೇವೆ. ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಈ ಕಾಂಕ್ರೀಟ್ ಕಾಡಿನಲ್ಲಿ ನೆಲೆಗೊಂಡಿದ್ದೇವೆ. ಆದರೆ, ನಮ್ಮ ಮೂಲ ಹಳ್ಳಿಗಳಲ್ಲಿದೆ ಎಂಬುದನ್ನು ನಾವು ಮರೆಯಬಾರದು. ಅಲ್ಲದೆ, ನಮ್ಮ ಮಣ್ಣಿನ ಗುಣ-ಘಮಲನ್ನೂ ಕೂಡ ನಾವು ಮರೆಯಬಾರದು” ಎಂದರು.
“ನಗರ ಭಾಗದ ಇಂದಿನ ಮಕ್ಕಳಿಗೆ ನಮ್ಮ ಹಳ್ಳಿ ಹೇಗಿರುತ್ತೆ? ನಮ್ಮ ಹಳ್ಳಿಯ ಬದುಕಿನ ಖುಷಿ ಎಂಥದ್ದು? ಭತ್ತ, ರಾಗಿಯ ತೆನೆ ಹೇಗಿರುತ್ತದೆ? ಎಂಬ ಕುರಿತು ತಿಳುವಳಿಕೆ ಕಡಿಮೆ. ಹೀಗಾಗಿ ನಮ್ಮ ಮಕ್ಕಳಿಗೆ ಹಳ್ಳಿಯ ಬದುಕಿನ ಶ್ರೀಮಂತಿಕೆಯನ್ನು ಪರಿಚಯಿಸುವ ಮತ್ತು ಆ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವೇ ಈ ಸುಗ್ಗಿ-ಹುಗ್ಗಿ ಕಾರ್ಯಕ್ರಮ” ಎಂದು ಅಭಿಪ್ರಾಯಪಟ್ಟರು.
“ಸುಗ್ಗಿ ಕಾಲದಲ್ಲಿ ಹೊಸ ಬೆಳೆಯ ರಾಶಿ, ಪಶುಗಳನ್ನೂ ಪೂಜಿಸಿ ನಂತರ ಹಾಡು ನೃತ್ಯ ಸೇರಿದಂತೆ ನಮ್ಮ ಜಾನಪದ ಸಂಪ್ರದಾಯದ ಜತೆಗೆ ಸಂಕ್ರಾತಿ ಹಬ್ಬವನ್ನು ಆಚರಿಸುವುದು ನಮ್ಮ ಮೂಲ ಸಂಸ್ಕೃತಿ. ಈ ಹಬ್ಬಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಇದು ನಮ್ಮ ಮಣ್ಣಿನ ಹಬ್ಬ. ಆದರೆ, ಕಾಲ ಬದಲಾದಂತೆ ನಾವು ನಮ್ಮ ಈ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಬೆಂಗಳೂರಿನ ಮಕ್ಕಳಿಗಂತೂ ನಮ್ಮ ಸಂಸ್ಕೃತಿಯ ಪರಿಚಯವೇ ಇಲ್ಲದಂತಾಗಿದೆ. ಇಂತಹ ದಿನಗಳಲ್ಲಿ ಸುಗ್ಗಿ-ಹುಗ್ಗಿಯಂತಹ ಕಾರ್ಯಕ್ರಮ ಸಾಕಷ್ಟು ಅರ್ಥಪೂರ್ಣ ಮತ್ತು ಅವಶ್ಯಕ ಕಾರ್ಯಕ್ರಮ” ಎಂದರು.
“ಇದು ಮಣ್ಣಿನ ಹಬ್ಬ, ಎಲ್ಲ ರೈತರ ಹಬ್ಬ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಬ್ಬವನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸಬೇಕು. ಆ ಮೂಲಕ ನಮಗೆ ಅನ್ನ, ನೀರು ಕೊಡುವ ಭೂಮಿಗೆ ಕೃತಜ್ಞತೆ ಸಲ್ಲಿಸಬೇಕು. ಅಲ್ಲದೆ, ಈ ಉತ್ತರಾಯಣ ಎಲ್ಲರ ಬದುಕಲ್ಲೂ ಶಾಂತಿ ಸುಖ ಮತ್ತು ನೆಮ್ಮದಿ ನೀಡಲಿ. ಎಲ್ಲರ ಬದುಕಲ್ಲೂ ಕತ್ತಲು ಸರಿದು ಬೆಳಕು ಹರಿಯಲಿ” ಎಂದು ಸಚಿವ ಕೃಷ್ಣ ಬೈರೇಗೌಡ ಶುಭ ಹಾರೈಸಿದರು.
ಸಮಾರಂಭದಲ್ಲಿ ಕಳೆದ ಎರಡು ದಿನಗಳಿಂದ ರಂಗೋಲಿ, ಚಿತ್ರಕಲೆ ಹಾಗೂ ಜನಪದ ನೃತ್ಯ ಸ್ಫರ್ಧೆಯಲ್ಲಿ ಪಾಲ್ಗೊಂಡ ವಿಜೇತ ವಿದ್ಯಾರ್ಥಿಗಳು ಹಾಗೂ ನೃತ್ಯಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಸಂಗೀತ ಕಾರ್ಯಕ್ರಮ ಹಾಗೂ ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಸೋನು ವೇಣುಗೋಪಾಲ್ ಅವರ ಹಾಸ್ಯ ಕಾರ್ಯಕ್ರಮ ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು.
ಈ ಸುದ್ದಿ ಓದಿದ್ದೀರಾ? ತುಮಕೂರು | ಭಾವನೆ, ಮನಸ್ಸುಗಳ ಸ್ವಚ್ಛಭಾರತ ನಿರ್ಮಾಣವಾಗಬೇಕಿದೆ: ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ
ಜಕ್ಕೂರು ಕ್ರೀಡಾಂಗಣದಲ್ಲಿ ಹಳ್ಳಿಭಾಗದ ತಿನಿಸುಗಳನ್ನು ನಗರದ ಜನರಿಗೆ ಪರಿಚಯಿಸುವ ಸಲುವಾಗಿ 80ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿತ್ತು. ಈ ಮಳಿಗೆಗಳಲ್ಲಿ ಸಾವಿರಾರು ಜನ ತಮ್ಮ ಮಕ್ಕಳೊಂದಿಗೆ ಹಳ್ಳಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು. ಜತೆಗೆ ಎರಡೂ ದಿನದ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಮತ್ತು ತಂಡ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಚಿತವಾಗಿ ಸಿಹಿ ಮತ್ತು ಖಾರ ಪೊಂಗಲ್ ವಿತರಿಸಿದರು.
ಗಮನ ಸೆಳೆದ ಜನಪದ ನೃತ್ಯ ಕಾರ್ಯಕ್ರಮ
ಸುಗ್ಗಿ-ಹುಗ್ಗಿ 2025 ಕಾರ್ಯಕ್ರಮಕ್ಕಾಗಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ 15ಕ್ಕೂ ಹೆಚ್ಚಿನ ಜನಪದ ನೃತ್ಯ ತಂಡ ನೀಡಿದ ಪ್ರದರ್ಶನ ಜನ ಗಮನಸೆಳೆಯಿತು.
ವೀರಗಾಸೆ, ಕಂಸಾಳೆ, ಹುಲಿ ಕುಣಿತ, ಸೋಮನ ಕುಣಿತ ಸೇರಿದಂತೆ ಎಲ್ಲ ಪ್ರಕಾರದ ಜನಪದ ನೃತ್ಯ ತಂಡಗಳನ್ನು ನಾಡಿನ ಎಲ್ಲ ಮೂಲೆಗಳಿಂದಲೂ ಆಹ್ವಾನಿಸಲಾಗಿತ್ತು. ಉಪಾಂತ್ಯ ದಿನವಾದ ಭಾನುವಾರ ಬೆಳಿಗ್ಗೆಯಿಂದಲೂ ಈ ತಂಡಗಳು ನೀಡಿದ ನೃತ್ಯ ಪ್ರದರ್ಶನ ನಗರ ಭಾಗದ ಜನರಿಗೆ ಹೊಸ ಅನುಭವ ನೀಡಿತು.