ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜೂನ್ ಮತ್ತು ಜುಲೈನಲ್ಲಿ ಕಡಿಮೆ ಪ್ರಮಾಣದ ಮಳೆಯಾದ ಪರಿಣಾಮ ಬಿತ್ತನೆ ಕುಂಠಿತವಾಗಿತ್ತು. ಇದೀಗ ಆಗಸ್ಟ್‌ನಲ್ಲೂ ವಾಡಿಕೆಗಿಂತ ಅರ್ಧದಷ್ಟು ಮಳೆ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂಬ ಭಾರತೀಯ ಹವಾಮಾನ ಇಲಾಖೆಯ ವರದಿಯಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ಆಗಸ್ಟ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಇತ್ತೀಚೆಗೆ ವರದಿ ಬಿಡುಗಡೆ ಮಾಡಿದೆ. ಕರ್ನಾಟಕದ ಕರಾವಳಿಯ ಬಹುತೇಕ ಜಿಲ್ಲೆಗಳು, ಮಲೆನಾಡು, ಉತ್ತರ, ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮಾತ್ರ ಜೂನ್‌ನಲ್ಲಿ ಮಳೆಯಾಗಿದೆ. ಆದರೆ ಬಯಲು ಸೀಮೆ ಜಿಲ್ಲೆಗಳಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ.
“ಮುಂಗಾರು ಋತುವಿನ ಉಳಿದ ಅವಧಿಯಲ್ಲಿ ಎಲ್‌ನಿನೊ ಬಲಗೊಳ್ಳಲುವ ನಿರೀಕ್ಷಿಯಿದೆ. ಹವಾಮಾನ ಬದಲಾವಣೆಯಿಂದ ಸಮುದ್ರದ ಉಷ್ಣತೆಯು ವೇಗವಾಗಿ ಏರುತ್ತಿದೆ. ಇದರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಾಗಲಿದೆ” ಎಂದು ಖಾಸಗಿ ಹವಾಮಾನ ಮುನ್ಸೂಚಕ ಸಂಸ್ಥೆ ಸ್ಕೈಮೆಟ್‌ನ ವ್ಯವಸ್ಥಾಪಕ ನಿರ್ದೇಶಕ ಜತಿನ್ ಸಿಂಗ್ ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿರುವುದು ಬಿತ್ತನೆಗಾಗಿ ಕಾಯುತ್ತಿರುವ ಹಾಗೂ ಬಿತ್ತನೆ ಮಾಡಿರುವ ಎರಡೂ ವರ್ಗದ ರೈತರ ಕಳವಳಕ್ಕೆ ಕಾರಣವಾಗಿದೆ.
ದಕ್ಷಿಣ ಒಳನಾಡಿನಲ್ಲಿ ಆಗಸ್ಟ್‌ನಲ್ಲಿ ವಾಡಿಕೆಯ 88.2 ಮಿಲಿ ಮೀಟರ್ ಮಳೆಯಾಬೇಕು. ಉತ್ತರ ಒಳನಾಡಿನಲ್ಲಿ 117.7, ಮಲೆನಾಡಿನಲ್ಲಿ 423.2, ಕರಾವಳಿಯಲ್ಲಿ 822.9 ಹಾಗೂ ಒಟ್ಟಾರೆಯಾಗಿ ರಾಜ್ಯದಲ್ಲಿ 220 ಮಿಲಿ ಮೀಟರ್ ಮಳೆಯಾಗಬೇಕಿದೆ. ಆದರೆ ಆಗಸ್ಟ್ ಆರಂಭವಾಗಿ ಆರು ದಿನವಾದರೂ ಕೂಡ ಮಳೆಯ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ.
ಮುಂಗಾರು ಋತುವಿನಲ್ಲಿ ಈ ವೇಳೆಗಾಗಲೇ ದಕ್ಷಿಣ ಒಳನಾಡಿನಲ್ಲಿ 151 ಮಿಮೀ ವಾಡಿಕೆಯ ಮಳೆಯಾಗಬೇಕಿತ್ತು. ಆದರೆ ಈವರೆಗೆ ಸುರಿದ ಮಳೆ 138 ಮಿಮೀ. ಹೀಗಾಗಿ ಇಲ್ಲಿ ಶೇಕಡಾ 8 ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿಯಾಗಿ ಉತ್ತರ ಒಳನಾಡಿನಲ್ಲಿ 228 ಮಿಮೀ ವಾಡಿಕೆಯ ಮಳೆಯಾಗಿದ್ದು, ಈವರೆಗೆ 245 ಮಿಮೀ. ಮಳೆ ಸುರಿದಿದ್ದು, ಶೇ.7 ರಷ್ಟು ಹೆಚ್ಚು ಮಳೆಯಾಗಿದೆ.
ಮಲೆನಾಡಿನಲ್ಲಿ ವಾಡಿಕೆಯಂತೆ 993 ಮಿಮೀ ಮಳೆಯಾಗಬೇಕು. ಅದರೆ ಈವರೆಗೆ 725 ಮಿಮೀ ಮಳೆಯಾಗಿದೆ. ಹೀಗಾಗಿ ಈ ಭಾಗದಲ್ಲಿ ಶೇ.27ರಷ್ಟು ಮಳೆ ಕಡಿಮೆಯಾಗಿದೆ. ಕರಾವಳಿಯಲ್ಲಿ 2,046 ಮಿಮೀ ಮಳೆಯಾಗಬೇಕಿತ್ತು. ಆದರೆ 1,909 ಮಿಮೀ ಮಳೆಯಾಗಿದೆ. ಹೀಗಾಗಿ ಇಲ್ಲಿ ಶೇ.7ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ವಾಡಿಕೆಯಂತೆ 489 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ ಈವರೆಗೆ 443 ಮಿಮೀನಷ್ಟು ಮಾತ್ರ ಮಳೆಯಾಗಿದ್ದು, ಮುಂಗಾರು ಮಳೆಯಲ್ಲಿ ಶೇ.9ರಷ್ಟು ಕೊರತೆ ಉಂಟಾಗಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯ
ಜುಲೈನಲ್ಲಿ ಉತ್ತರ ಒಳನಾಡಿನ ಬೆಳಗಾವಿ ಸೇರಿದಂತೆ ಕೆಲವೆಡೆ ವಾಡಿಕೆಯಂತೆ ಮಳೆಯಾಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ಕಲಬುರಗಿ, ಹಾಸನ, ಸೇರಿದಂತೆ ಬಹುತೇಕ ಕಡೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ.
ಹೊಲವನ್ನು ಉಳುಮೆ ಮಾಡಿ ಬಿತ್ತನೆಗಾಗಿ ಎಲ್ಲ ರೈತರು ಸಿದ್ಧತೆ ಮಾಡಿಕೊಂಡಿದ್ದು, ಜುಲೈ ಕೊನೆಯ ವಾರದಲ್ಲೇ ರಾಗಿ ಬಿತ್ತನೆಗೆ ಕಾದು ಕುಳಿತರೂ ಈವರೆಗೆ ಮಳೆ ಬಾರದ ಹಿನ್ನೆಲೆಯಲ್ಲಿ ಇನ್ನೂ ಬಿತ್ತನೆ ಸಾಧ್ಯವಾಗಿಲ್ಲದಿರುವುದು ಕಂಡುಬಂದಿದೆ.