ವಿಧಾನಸಭೆ ಅಧಿವೇಶನ ಮುಂದುವರಿಕೆ ಮತ್ತು ಲೋಕಸಭಾ ವಿಪಕ್ಷ ನಾಯಕರು ಬೆಂಗಳೂರಿನಲ್ಲಿ ಸಭೆ ಆಯೋಜಿಸಿರುವ ಹಿನ್ನೆಲೆ ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರಿನ ಕೆಲವೆಡೆ ಸಾರ್ವಜನಿಕ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, 24ರವರೆಗೆ ಸದನ ಮುಂದುವರೆಯಲಿದೆ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳ ಮೈತ್ರಿ ಎಣೆಯುತ್ತಿರುವ ಲೋಕಸಭಾ ವಿರೋಧ ಪಕ್ಷಗಳ ಮುಖಂಡರು ಬೆಂಗಳೂರಿನ ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಜುಲೈ 17 ಮತ್ತು 18ರಂದು ಸಭೆ ನಡೆಸಲಿದ್ದಾರೆ.
ಹೀಗಾಗಿ, ಗಣ್ಯರಿಗೆ ಭದ್ರತೆ ಒದಗಿಸುವ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಹಲವೆಡೆ ಸಂಚಾರ ಮಾರ್ಗ ಬದಲಿಸಲಾಗಿದೆ. ಜುಲೈ 17 ಮತ್ತು 18ರಂದು ವಿಧಾನಸೌಧ ಎದುರಿನ ಬಿ.ಆರ್ ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರಸ್ತೆ, ಪ್ಯಾಲೆಸ್ ರಸ್ತೆ. ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆಗಳನ್ನು ಸಾರ್ವಜನಿಕರು ಬಳಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಈ ಎರಡೂ ದಿನಗಳು ಬಿ.ಆರ್ ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಬಳ್ಳಾರಿ ರಸ್ತೆಯಲ್ಲಿ ವಾಹನ ನಿಲುಗಡೆಯನ್ನೂ ನಿಷೇಧಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅತೀ ಗಣ್ಯ ವ್ಯಕ್ತಿಗಳ ಸಂಚಾರ ಇರುವ ಕಾರಣ ಕೆಲವು ರಸ್ತೆಗಳಲ್ಲಿ ಸಾರ್ವಜನಿಕ ವಾಹನ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಪರ್ಯಾರ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಸಹಕಾರ ನೀಡಬೇಕು” ಎಂದು ಪೊಲೀಸರು ಮನವಿ ಮಾಡಿದ್ದಾರೆ.
ವಿಪಕ್ಷಗಳ ಸಭೆಯಲ್ಲಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ವಿವಿಧ ರಾಜ್ಯಗಳ, ಹಲವು ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ.