ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇಡೀ ದೇಶದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ವಿಶೇಷವಾಗಿ ಅರಣ್ಯ ಇಲಾಖೆ ಮತ್ತು ಅರಣ್ಯ ಅಧಿಕಾರಿಗಳ ಕಾರ್ಯನಿರ್ವಹಣೆ ಉತ್ತಮವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶ್ಲಾಘನೆ ವ್ಯಕ್ತಪಡಿಸಿದರು.
ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ 69ನೇ ವನ್ಯಜೀವಿ ಸಪ್ತಾಹ-2023ದಡಿ ಹಮ್ಮಿಕೊಂಡಿದ್ದ ವಿಂಟೇಜ್ ವಾಹನ ಯಾನಕ್ಕೆ ರಾಜಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
“ಪ್ರಾಚೀನ ಗ್ರಂಥಗಳಲ್ಲಿ ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆ ಕುರಿತು ಉಲ್ಲೇಖವಿದೆ. ಮಾನವರು ಮತ್ತು ವನ್ಯಜೀವಿಗಳು ಯುಗ ಯುಗಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಪ್ರಸ್ತುತದಲ್ಲಿ ಈ ವನ್ಯಜೀವಿಗಳ ಸಂರಕ್ಷಣೆಯ ಅವಶ್ಯಕತೆ ಹೇರಳವಾಗಿದೆ. ವನ್ಯಜೀವಿಗಳನ್ನು ಸಂರಕ್ಷಿಸಲು, ಕಾಡುಗಳು ಸಮೃದ್ಧವಾಗಿರುವುದು ಬಹಳ ಮುಖ್ಯ ಎಂದು ಹೇಳಿದರು.
ʼಪರಿಸರ ಸಂರಕ್ಷಣಾ ಕಾಯಿದೆ’, ’ಅರಣ್ಯ ಸಂರಕ್ಷಣಾ ಕಾಯ್ದೆ’, ’ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆ’, ’ಪ್ರಾಜೆಕ್ಟ್ ಹುಲಿ’, ’ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು’, ’ಭಾರತದಲ್ಲಿ ಅರಣ್ಯಗಳು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಜೈವಿಕ-ಪ್ರಾದೇಶಿಕ ಮೀಸಲು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳಿಂದಾಗಿ ಕೆಲವು ಜಾತಿಗಳ ಅಳಿವಿನಂಚಿನಿಂದ ಉಳಿಸಲಾಗಿದೆʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ
“69ನೇ ವನ್ಯಜೀವಿ ಸಪ್ತಾಹದ ಪ್ರಾರಂಭದ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಭಾರತೀಯ ವಿಂಟೇಜ್ ವಾಹನಗಳ ಒಕ್ಕೂಟದ ಸಹಯೋಗದೊಂದಿಗೆ ಅರಣ್ಯ ಇಲಾಖೆಯು ಈ ಅಭಿಯಾನ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ. ಈ ವಿಂಟೇಜ್ ವಾಹನ ಯಾನ ವನ್ಯಜೀವಿ ಸಂರಕ್ಷಣೆಯ ಕಡೆಗೆ ಸಕಾರಾತ್ಮಕ ಸ್ಫೂರ್ತಿ ನೀಡಲಿ” ಎಂದರು.