ಆತ್ಮರಕ್ಷಣೆಯ ರಿವಾಲ್ವರ್‌ನಿಂದ ‘ಮಿಸ್‌ಫೈರ್’ ಆಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಗಾಯಗೊಂಡವರು. ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ ಅಚಾನಕ್ಕಾಗಿ ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಗಾಯಗೊಂಡಿದ್ದು, ಮಂಗಳೂರು ನಗರದ ಪಡೀಲ್‌ನಲ್ಲಿರುವ ಜನಪ್ರಿಯ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಇಂಟಕ್ ಮುಖಂಡರಾಗಿರುವ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರು ಇತ್ತೀಚೆಗಷ್ಟೇ ತನ್ನ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದು ರಿವಾಲ್ವರ್ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.

ಇಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೊಡಾಜೆ ಸಮೀಪದ ಅನಂತಾಡಿ ಬಳಿ ಕಾರಿನಲ್ಲಿದ್ದ ತನ್ನದೇ ರಿವಾಲ್ವರ್‌ನ ಗುಂಡು ಆಕಸ್ಮಿಕವಾಗಿ ಸಿಡಿದು ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಸ್ಪಷ್ಟತೆಯ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ಶೆಟ್ಟಿಯವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ರಾಜ್ಯ ಮಾಹಿತಿ ಆಯುಕ್ತರ ಆಯ್ಕೆ ಪಟ್ಟಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್
ಈ ಬಗ್ಗೆ ಗಾಯಾಳು ಶೆಟ್ಟಿಯವರು ದಾಖಲಾಗಿರುವ ಮಂಗಳೂರು ಪಡೀಲ್ ಜನಪ್ರಿಯ ಆಸ್ಪತ್ರೆಯ ವೈದ್ಯಾಧಿಕಾರಿ, ಡೈರೆಕ್ಟರ್ ಡಾ.ಕಿರಾಶ್ ಪರ್ತಿಪ್ಪಾಡಿಯವರನ್ನು ಈದಿನ ಡಾಟ್ ಕಾಮ್ ಸಂಪರ್ಕಿಸಿದಾಗ, “ಮಿಸ್‌ಫೈರ್ ಆಗಿ ಗಾಯಗೊಂಡಿರುವುದಾಗಿ ಪ್ರಾಥಮಿಕವಾಗಿ ನಮಗೂ ಮಾಹಿತಿ ಸಿಕ್ಕಿದೆ. ನಾನು ಬೇರೊಂದು ರೋಗಿಯ ಶಸ್ತ್ರಚಿಕಿತ್ಸೆಯಲ್ಲಿರುವ ವೇಳೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನನಗೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಮಾಹಿತಿ ಸಿಕ್ಕ ಬಳಿಕ ತಿಳಿಸುವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್ ಅವರನ್ನು ಸಂಪರ್ಕಿಸಿದಾಗ, “ಮಿಸ್‌ಫೈರ್ ಆಗಿ ಈ ಘಟನೆ ನಡೆದಿದೆ ಅಂತ ನಮಗೂ ಸಿಕ್ಕಿರುವ ಪ್ರಾಥಮಿಕ ಮಾಹಿತಿ. ಈ ಬಗ್ಗೆ ಕುಟುಂಬದ ಸದಸ್ಯರನ್ನು ಸಂಪರ್ಕಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
