ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಬಾಬತೋಟದ ರೈತರೊಬ್ಬರ ಮನೆಗೆ ಚಿರತೆ ಬಂದು ನಾಯಿಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸುವ ವೇಳೆ ನಾಯಿಗಳು ಜೋರಾಗಿ ಕೂಗಿಕೊಂಡಾಗ ಚಿರತೆ ಓಡಿಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಬಾಬತೋಟ ನಿವಾಸಿ ಪ್ರಕಾಶ್ ಪೂಜಾರಿ ಅವರ ಮನೆಯಂಗಳಕ್ಕೆ ಜು.17ರ ತಡರಾತ್ರಿ ಚಿರತೆ ಬಂದಿದೆ. ಸಿಸಿಟಿವಿಯ ಮಾನಿಟರ್ ಹಾಳಾಗಿದ್ದ ಕಾರಣ ಬಂದಿರುವುದು ಚಿರತೆ ಎಂಬುದು ರವಿವಾರ ಮಾನಿಟರ್ ದುರಸ್ತಿಯಾದ ಬಳಿಕ ಮನೆಯವರ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಶಕ್ತಿ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು
ಚಿರತೆ ಬಂದ ವೇಳೆ ಮನೆಯಲ್ಲಿದ್ದ 2 ನಾಯಿಗಳು ಜೋರಾಗಿ ಕೂಗಿಕೊಂಡ ಸಂದರ್ಭದಲ್ಲಿ ಪ್ರಕಾಶ್ ಹೊರಗೆ ನೋಡುವುದಕ್ಕೆ ಹೊರಟಾಗ ಹೆದರಿಕೆಯಿಂದ ಮನೆಮಂದಿ ನಿಲ್ಲಿಸಿದ್ದರು. ಸಿಸಿಟಿವಿಯಲ್ಲಿ ಚಿರತೆಯು ನಾಯಿಗಳು ಬೊಗಳಿದ್ದರಿಂದ ಓಡಿ ಹೋಗಿರುವ ದೃಶ್ಯ ಸೆರೆಯಾಗಿದ್ದರೂ, ಅದನ್ನು ನೋಡುವ ಮಾನಿಟರ್ ಹಾಳಾಗಿತ್ತು.
ರಾತ್ರಿಯಲ್ಲಿ ಯಾರೋ ಬಂದು ಹೋಗಿದ್ದಾರೆ ಎಂಬ ಆತಂಕದಲ್ಲಿ ಮನೆಯವರು ಕಾಲ ಕಳೆಯುತ್ತಿದ್ದರು. ಮರುದಿನ ಮಾನಿಟರ್ ದುರಸ್ತಿಗೆ ಕೊಟ್ಟು ರವಿವಾರ ದುರಸ್ತಿಯಾಗಿ ಸಿಕ್ಕ ಬಳಿಕವೇ ಬಂದಿರುವುದು ಮನುಷ್ಯರಲ್ಲ ಅದು ಚಿರತೆ ಎಂದು ಗೊತ್ತಾಗಿದೆ. ಚಿರತೆಯು ದಾಳಿ ಮಾಡುವ ವೇಳೆ ಒಂದು ನಾಯಿಗೆ ಸಣ್ಣ ಗಾಯವಾಗಿದೆ. ಅದು ನಾಯಿಗಳೇ ಜಗಳ ಮಾಡಿಕೊಂಡು ಗಾಯ ಮಾಡಿಕೊಂಡಿರಬಹುದು ಮನೆಯವರು ಭಾವಿಸಿದ್ದರು.
ಇದನ್ನೂ ಓದಿ: ಉಳ್ಳಾಲ | ರೈಲ್ವೆ ಟ್ರ್ಯಾಕ್ ಅಂಡರ್‌ಪಾಸ್ ಕಾಮಗಾರಿಗೆ ರೈಲ್ವೆಯಿಂದ ಗ್ರೀನ್ ಸಿಗ್ನಲ್
ಮನೆಗಳ ಬಳಿಯಲ್ಲಿ ಚಿರತೆಗಳ ಓಡಾಟ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ, ಅವರು ಪಟಾಕಿ ಸಿಡಿಸಿ ಓಡಿಸಿ ಎಂದು ಸಲಹೆ ನೀಡುತ್ತಾರೆ ಎಂದು ಪ್ರಕಾಶ್ ಪೂಜಾರಿ ದೂರಿದರು.