ಪದವೀಧರನಾಗಿಯೂ ನಿರುದ್ಯೋಗಿಯಾಗಿದ್ದ ಹಿಂದೂ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ, ಸ್ಥಳೀಯ ಮುಸ್ಲಿಂ ಯುವಕರು ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನಡೆದಿದೆ.
ನಿರುದ್ಯೋಗಿಯಾಗಿದ್ದ ಚಿಂತೆಯಲ್ಲಿ ಪುತ್ತೂರಿನ ಯುವಕನೋರ್ವ ಪಾಣೆಮಂಗಳೂರಿನ ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯ ಮುಸ್ಲಿಂ ಯುವಕರ ತಂಡ ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿರುವುದಾಗಿ ವರದಿಯಾಗಿದೆ.
ಪುತ್ತೂರಿನ ಆನಂದ ಎಂಬವರ ಪುತ್ರ ನಿಶ್ಚಿತ್ (25) ಎಂಬಾತನೇ ನೇತ್ರಾವತಿ ನದಿಗೆ ಹಾರಲು ಯತ್ನಿಸಿದ ಯುವಕ. ಈತ ಎಂಎಸ್ ಡಬ್ಲ್ಯೂ ಪದವೀಧರನಾಗಿದ್ದು, ಸೂಕ್ತ ಉದ್ಯೋಗ ದೊರೆಯದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೊಳಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ವಿಚಾರಿಸಿದಾಗ ತಿಳಿದುಬಂದಿದೆ.

ಸೋಮವಾರ ಬೆಳಗ್ಗೆ ನೇತ್ರಾವತಿ ನದಿಯ ಸಮೀಪಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಈತ, ವಾಹನ ನಿಲ್ಲಿಸಿ ನದಿಗೆ ಹಾರುವ ಸಿದ್ದತೆಯಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ಯುವಕರಾದ ಹನೀಫ್, ಸಲ್ಮಾನ್ ಫಾರಿಸ್, ಇರ್ಫಾನ್ ಖಲೀಲ್, ನೌಫಾಲ್ ಸಿ ಪಿ, ತಸ್ಲೀಂ ಆರೀಫ್, ಮುಖ್ತಾರ್ ಅಕ್ಕರಂಗಡಿ, ಪಿ.ಎಂ. ಆರಿಫ್ ಹಾಗೂ ಮಮ್ಮು ಗೂಡಿನಬಳಿ ಅವರ ತಂಡ ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ನಿಶ್ಚಿತ್‌ನನ್ನು ಆತ್ಮಹತ್ಯೆಯ ದವಡೆಯಿಂದ ಪಾರು ಮಾಡಿದ್ದಾರೆ.
ಆ ಬಳಿಕ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ, ಬಂಟ್ವಾಳ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿಚಾರಣೆ ನಡೆಸಿದ್ದು, ಪೋಷಕರಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
