ಬಂಟ್ವಾಳ | ಜನಿಸಿದ ದಿನವೇ ದಫನವಾದ ಈ ಅಬ್ದುಲ್ ರಹ್ಮಾನ್ ಯಾರು? ಇಲ್ಲಿದೆ ಪೂರ್ತಿ ವಿವರ

Date:

Advertisements

ಬಂಟ್ವಾಳ ತಾಲೂಕಿನ ಹೃದಯ ಭಾಗವಾಗಿ ಗುರುತಿಸಿಕೊಂಡಿರುವ ಬಿ.ಸಿ.ರೋಡಿನಿಂದ ‘ಕೊಳ್ತಮಜಲು’ವಿಗೆ 10 ಕಿಲೋ ಮೀಟರ್ ದೂರದ ದಾರಿ. ಬಿ.ಸಿ.ರೋಡ್ ಕೈಕಂಬದಿಂದ ಕಲ್ಪನೆ ರಸ್ತೆಯಾಗಿ ಅಂಕು ಡೊಂಕಾದ, ಏರು ಇಳಿತದ ಹಾದಿಯಲ್ಲಿ ಸಾಗಬೇಕು. ಹಚ್ಚ ಹಸುರಿನಿಂದ ಕಂಗೊಳಿಸುವ ಗುಡ್ಡ ಬಯಲು ಪ್ರದೇಶದ ನಡುವೆ ಸಾಗಿರುವ ಈ ಹಾದಿಯಲ್ಲಿ ಸುರಿಯುವ ಜಡಿ ಮಳೆಗೆ ಹೋಗಿ ಬರುವಾಗ ಘಾಟಿ ಏರಿ ಇಳಿದ ಅನುಭವವಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಗ್ರಾಮ ಬಡಗಬೆಲ್ಲೂರಿನ ‘ಕೊಳ್ತಮಜಲು’ ಇದೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಲ್ಲಿದೆ. ಕೊಳ್ತಮಜಲಿನ ಅಬ್ದುಲ್ ಖಾದರ್ ಮತ್ತು ಆಸಿಯಮ್ಮ ದಂಪತಿಯ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಲ್ಲಿ ಕಿರಿಯ ಪುತ್ರನಾದ ಅಬ್ದುಲ್ ರಹ್ಮಾನ್‌ನನ್ನು ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳ ತಂಡ ತಲವಾರಿನಿಂದ ಕೊಚ್ಚಿ ಕೊಂದು ಹಾಕಿದೆ. ಆ ಬಳಿಕ ಕೊಳ್ತಮಜಲು ರಾಜ್ಯ ಮಟ್ಟದಲ್ಲಿ ಸುದ್ದಿಯಲ್ಲಿದೆ.

ಮೇ 28 ಅಬ್ದುಲ್ ರಹ್ಮಾನ್ ಹುಟ್ಟಿದ ದಿನ. ಮೇ 27ರಂದು ಸಂಜೆ ಆತನನ್ನು ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಕೊಲೆ ಮಾಡಿದೆ. ಗಂಭೀರ ಗಾಯಗೊಂಡ ರಹ್ಮಾನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತನ್ನ ಹುಟ್ಟಿದ ದಿನವಾದ ಮೇ 28ರಂದು ಮಧ್ಯಾಹ್ನದ ವೇಳೆಗೆ ಕೊಳ್ತಮಜಲು ಮುಹಿಯುದ್ದೀನ್ ಜುಮಾ ಮಸೀದಿಯ ಖಬರಸ್ತಾನದಲ್ಲಿ ರಹ್ಮಾನ್ ಮೃತದೇಹದ ದಫನ ಕಾರ್ಯ ನೆರವೇರಿದೆ. ದಫನ ಕಾರ್ಯದ ಬಳಿಕ ಇಡೀ ಗ್ರಾಮ ಮಾತ್ರವಲ್ಲದೇ ಜಿಲ್ಲೆಯಲ್ಲೇ ಸ್ಮಶಾನ ಮೌನ ಆವರಿಸಿದೆ‌.

Advertisements

ಎಸ್.ಎಸ್.ಎಲ್.ಸಿ. ವರೆಗೆ ವಿದ್ಯಾಭ್ಯಾಸ ಮಾಡಿರುವ ರಹ್ಮಾನ್, ಆ ಬಳಿಕ ಕ್ರಿಶ್ಚಿಯನ್ ಸಮುದಾಯದ ಒಬ್ಬರ ಲೋಬೋ ಪಿಕಪ್‌ನಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಏಳು ವರ್ಷದ ಹಿಂದೆ ಸ್ವಂತ ಪಿಕಪ್ ಖರೀದಿಸಿದ್ದ ರಹ್ಮಾನ್, ಆ ಬಳಿಕ ಅದರಲ್ಲಿ ಮರಳು, ಜಲ್ಲಿ ಕಲ್ಲು, ಹಾರ್ಡ್‌ವೇರ್ ಸೇರಿದಂತೆ ಇತರೆ ಕಟ್ಟಡ ಕಾಮಗಾರಿಯ ಸಾಮಗ್ರಿಗಳನ್ನು ಸಾಗಾಟ ಮಾಡಿ, ಅದರಲ್ಲಿ ಬರುತ್ತಿದ್ದ ಹಣದಲ್ಲಿ ಕುಟುಂಬವನ್ನು ಸಾಕುತ್ತಿದ್ದ. ವೃದ್ಧ ತಂದೆ ತಾಯಿಗೂ, ಪತ್ನಿ ಕುಟುಂಬಕ್ಕೂ ರಹ್ಮಾನ್ ಆಸರೆಯಾಗಿದ್ದ. ಮದುವೆಯಲ್ಲೂ ಆದರ್ಶವನ್ನು ಮೈಗೂಡಿಸಿಕೊಂಡಿದ್ದ ರಹ್ಮಾನ್, ಬಡ ಕುಟುಂಬಕ್ಕೆ ಸೇರಿದ್ದ ಯುವತಿಯನ್ನೇ ಬಾಳಸಂಗಾತಿಯಾಗಿ ಆರಿಸಿಕೊಂಡಿದ್ದ.

ಮೇ 27ರಂದು ಬಂಟ್ವಾಳ ತಾಲೂಕಿನ ಮೂಲರಪಟ್ನದಲ್ಲಿ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಶುಭ ಕಾರ್ಯದ ಔತಣ ಕೂಟಕ್ಕೆ ಪತ್ನಿ, ಮಕ್ಕಳು, ಅತ್ತೆಯೊಂದಿಗೆ ತೆರಳಲು ರಹ್ಮಾನ್ ಸಿದ್ದನಾಗಿ ನಿಂತಿದ್ದ. ಆ ವೇಳೆಗೆ ಅದೇ ಗ್ರಾಮದ ಪರಿಚಯಸ್ಥರೊಬ್ಬ ಕರೆ ಮಾಡಿ ತುರ್ತಾಗಿ ಒಂದು ಲೋಡ್ ಮರಳು ಬೇಕು ಎಂದಿದ್ದಾನೆ. ಔತಣ ಕೂಟಕ್ಕೆ ತೆರಳುವುದನ್ನು ಮೊಟಕುಗೊಳಿಸಿದ ರಹ್ಮಾನ್, ಪತ್ನಿ, ಮಕ್ಕಳು, ಅತ್ತೆಯನ್ನು ಸಂಬಂಧಿಕರ ಮನೆಗೆ ಕಳುಹಿಸಿ ತನ್ನ ಸಹಾಯಕನನ್ನು ಕರೆದುಕೊಂಡು ಪಿಕಪ್ ನಲ್ಲಿ ಮರಳು ಸಾಗಾಟಕ್ಕೆ ತೆರಳಿದ್ದ. ಮನೆಯೊಂದರ ಅಂಗಳದಲ್ಲಿ ಮರಳು ಅನ್ ಲೋಡ್ ಮಾಡಿ ಪಿಕಪ್ ನಲ್ಲಿ ಕುಳಿತಿದ್ದ ವೇಳೆ ಬಂದ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಕೊಂದು ಹಾಕಿದೆ.

ಐದು ವರ್ಷಗಳ ಹಿಂದೆ ತನ್ನದೇ ಜಮಾಅತಿನ ಮುಹಮ್ಮದ್ ಹನೀಫ್ ಯಾನೆ ಪುತ್ತು ಮೋನು ಎಂಬವರ ಹಿರಿಯ ಪುತ್ರಿ ಫಾತಿಮತ್ ನುಶ್ರಾಳನ್ನು ರಹ್ಮಾನ್ ವಿವಾಹವಾಗಿದ್ದ. ಯಾವುದೇ ವರದಕ್ಷಿಣೆ ಬೇಡಿಕೆ ಇಲ್ಲದೆ ಬಡ ಕುಟುಂಬದ ಹೆಣ್ಣನ್ನು ಅವರ ಮನೆಯವರಲ್ಲಿ ಕೇಳಿ ಮದುವೆಯಾಗಿದ್ದ. ರಹ್ಮಾನ್ ಮತ್ತು ನುಶ್ರಾ ದಂಪತಿಗೆ ಮೂರೂವರೆ ವರ್ಷದ ಫಾತಿಮಾ ನಶ್ವಾ ಎಂಬ ಪುತ್ರಿ ಮತ್ತು ಒಂದೂವರೆ ವರ್ಷದ ಮುಹಮ್ಮದ್ ನಶಿಫ್ ಎಂಬ ಪುತ್ರನಿದ್ದಾನೆ. ಕೋಮುವಾದಿಗಳ ರಕ್ತದ ದಾಹಕ್ಕೆ ಇದೀಗ ಪತ್ನಿ ಫಾತಿಮತ್ ನುಶ್ರಾ ವಿಧವೆಯಾದರೆ, ಮಕ್ಕಳಿಬ್ಬರು ತಬ್ಬಲಿಯಾಗಿದ್ದಾರೆ. ವೃದ್ಧ ತಂದೆ, ತಾಯಿ, ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ‌.

WhatsApp Image 2025 05 28 at 8.52.05 PM

“ಈ ಜಮಾಅತ್ ನ ಮಸೀದಿಯಲ್ಲಿ ನಾನು 25 ವರ್ಷ ಸೇವೆ ಸಲ್ಲಿಸಿದ್ದೇನೆ. ರಹ್ಮಾನ್ ನನ್ನ ಶಿಷ್ಯ. ನಾನು ಆತನನ್ನು ಹತ್ತಿರದಿಂದ ಬಲ್ಲೆ. ಸೌಮ್ಯ ಸ್ವಭಾವದ, ಯಾವುದೇ ಕೆಟ್ಟ ಹವ್ಯಾಸಗಳು ಇಲ್ಲದ ವ್ಯಕ್ತಿತ್ವವನ್ನು ಹೊಂದಿದ್ದ ತರುಣ ಆತ. ಧಾರ್ಮಿಕ ಚೌಕಟ್ಟಿನಲ್ಲಿ ಬದುಕುತ್ತಿದ್ದ ಆತ, ಯಾರ ಮನಸ್ಸಿಗೂ ಸಾಸಿವೆಯಷ್ಟು ನೋವು ಮಾಡಿದವನಲ್ಲ. ಆತನನ್ನು ಯಾಕೆ ಕೊಂದರು. ಅದರಿಂದ ಅವರಿಗೆ ಆದ ಲಾಭ ಏನು ಎಂದು ಯಾರಿಗೂ ಗೊತ್ತಿಲ್ಲ” ಎಂದು ರಹ್ಮಾನ್‌ನ ಮದರಸಾ ಅಧ್ಯಾಪಕರಾಗಿದ್ದ ಅಬ್ದುಲ್ ಇಬ್ರಾಹೀಂ ದಾರಿಮಿ ಈದಿನ ಡಾಟ್‌ ಕಾಮ್ ಜೊತೆಗೆ ಮಾತನಾಡುತ್ತಾ ಹೇಳಿದರು.

“ಕೊಳ್ತಮಜಲು ಮುಹಿಯುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿಯಾಗಿರುವ ರಹ್ಮಾನ್ ಧಾರ್ಮಿಕ ಸಂಘಟನೆ ಎಸ್.ಕೆ.ಎಸ್.ಎಸ್.ಎಫ್. ಸದಸ್ಯ. ಬೆಳಗ್ಗಿನ ನಮಾಝ್ ಮುಗಿಸಿ ತನ್ನ ಪಿಕಪ್‌ನಲ್ಲಿ ಬಾಡಿಗೆಗೆ ತೆರಳುತ್ತಿದ್ದ. ತನ್ನ ಹೆಂಡತಿಯ ತಂಗಿಗೆ ತನ್ನ ಅತ್ತಿಗೆಯ ತಮ್ಮನ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿದ್ದ. ಆತನ ಹಾಗೂ ಪತ್ನಿಯ ಕುಟುಂಬದ ಹೊರೆ ಆತನ ಹೆಗಲಿಗೆ ಇತ್ತು. ಹಾಗಾಗಿ ದಿನದ ಹೆಚ್ಚಿನ ಸಮಯ ದುಡಿಮೆಯಲ್ಲೇ ಕಳೆಯುತ್ತಿದ್ದ. ಅಲ್ಪ ಸ್ವಲ್ಪ ಸಮಯ ಸಿಕ್ಕಿದರೆ ಮಸೀದಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ಊರಿನ ಜನರ ಕಷ್ಟ ದುಃಖಕ್ಕೆ ನೆರವಾಗುತ್ತಿದ್ದ. ಹಾಗಾಗಿ ರಹ್ಮಾನ್ ಇಡೀ ಜಮಾಅತ್‌ನವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ” ಎಂದು ರಹ್ಮಾನ್ ಅವರ ಸಂಬಂಧಿಕ ಮುಹಮ್ಮದ್ ಅಲಿ ಎಂಬವರು ಹೇಳಿದ್ದಾರೆ.

WhatsApp Image 2025 05 28 at 8.53.15 PM

“ಗಣೇಶ ಚತುರ್ಥಿ ಸಂದರ್ಭ ಹಿಂದೂಗಳಿಗೆ ಸಿಹಿ ತಿಂಡಿ, ತಂಪು ಪಾನಿಯಾ ಹಂಚುವುದರಲ್ಲಿ ರಹ್ಮಾನ್ ಮುಂಚೂಣಿಯಲ್ಲಿದ್ದ. ಎಲ್ಲಾ ಧರ್ಮದವರ ಜೊತೆಯೂ ಪ್ರೀತಿ ವಿಶ್ವಾಸದೊಂದಿಗೆ ಬಾಳುತ್ತಿದ್ದ. ಈ ಊರಿನ ಯಾವ ಧರ್ಮದ ಯಾರೊಬ್ಬರಿಗೂ ಆತನ ಬಗ್ಗೆ ಕೆಟ್ಟ ಅಭಿಪ್ರಾಯಗಳಿಲ್ಲ. ತುರ್ತಾಗಿ ಒಂದು ಲೋಡ್ ಮರಳು ಬೇಕೆಂದು ಇದೇ ಊರಿನ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಮನೆ ಅಂಗಳದಲ್ಲಿ ಎರಡು ಲೋಡ್ ಮರಳು ಇದ್ದರೂ ತುರ್ತಾಗಿ ಮತ್ತೊಂದು ಲೋಡ್ ಮರಳು ಬೇಕು ಎಂದು ಕರೆ ಮಾಡಿ ರಹ್ಮಾನ್ ನನ್ನು ಸ್ಥಳಕ್ಕೆ ಕರಿಸಿರುವ ಬಗ್ಗೆ ನಮಗೆ ಅನುಮಾನ ಇದೆ. ಇದೊಂದು ಪೂರ್ವ ಯೋಜಿತ, ವ್ಯವಸ್ಥಿತ ಕೃತ್ಯವಾಗಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಭಾಗಿಯಾದವರನ್ನು ಪತ್ತೆ ಹಚ್ಚಿ ಕಾನೂನಿನಲ್ಲಿ ಶಿಕ್ಷೆಯಾಗುವಂತೆ ಮಾಡಬೇಕು” ಎಂದು ಊರಿನ ಮೋನು ಎಂಬವರು ಆಗ್ರಹಿಸಿದ್ದಾರೆ.

ಈ ಕೊಲೆ ಕೃತ್ಯದಲ್ಲಿ ಸುಮಾರು 15 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಕೃತ್ಯ ನಡೆದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಆ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಂಘಪರಿವಾರ ಬೆಂಬಲಿತ ಮತಾಂಧ ಯುವಕರ ಕತ್ತಿಯೇಟಿಗೆ ಬಲಿಯಾದ ಅಮಾಯಕ ರಹ್ಮಾನ್ ತನ್ನ ಮುದ್ದಿನ ಮಕ್ಕಳ ಜೊತೆಗಿನ ಸಂತಸದ ಕ್ಷಣಗಳ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸದ್ಯ ವೈರಲಾಗಿದ್ದು, ನೋಡುಗರನ್ನು ಕರುಳು ಕಿವಿಚುವಂತೆ ಮಾಡುತ್ತದೆ. ಬಜ್ಪೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬ ಸಂಘಪರಿವಾರದ ಮುಖಂಡ, “ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ ತೀರಿಸಿಯೆ ಸಿದ್ದ” ಎಂದು ಮೇ 25ರಂದು ಕರೆ ನೀಡಿದ ಎರಡೇ ದಿನಗಳ ಅಂತರದಲ್ಲಿ ಅಮಾಯಕನ ಕೊಲೆ ನಡೆದೇಹೋಗಿದೆ.

ಇದನ್ನು ಓದಿದ್ದೀರಾ? ಮಂಗಳೂರು | ಓಟು ರಾಜಕೀಯದಿಂದ ಅಮಾಯಕರ ಸಾವು ನಿಲ್ಲಲಿ, ಕೋಮುದ್ವೇಷ ಅಳಿಯಲಿ: ನಟ ನವೀನ್ ಪಡೀಲ್

ಇನ್ನು, ದ.ಕ ಜಿಲ್ಲೆಯ ಇತ್ತೀಚಿನ ಬೆಳವಣಿಗೆ ಮತ್ತು ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯಕ್ಕೆ ಮನನೊಂದು‌ ಸಾಮೂಹಿಕ ರಾಜೀನಾಮೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ತೀರ್ಮಾನ ಮಾಡಿದ್ದಾರೆ. ಕಳೆದ ಕೆಲವೊಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ, ಮನೆಯಿಂದ ಕೆಲಸಕ್ಕೆಂದು ಹೊರಗಡೆ ಹೋದವರು, ಮತ್ತೆ ಸುರಕ್ಷಿತವಾಗಿ ಮನೆಗೆ ಮರಳಿ ಬರುತ್ತಾರೆ ಎಂಬ ಯಾವ ‘ಗ್ಯಾರಂಟಿ’ಯೂ ಇಲ್ಲದಾಗಿದೆ.

ರಹ್ಮಾನ್ ಅವರ ಕೊಲೆ ನಡೆಯುವುದಕ್ಕೂ ಮುನ್ನ ಮಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಮಾತನಾಡಿದ್ದ ತುಳು ರಂಗಭೂಮಿ, ಸಿನೆಮಾ ರಂಗದ ಖ್ಯಾತ ನಟ ನವೀನ್ ಡಿ ಪಡೀಲ್ ಕೋಮು ರಾಜಕಾರಣದ ವಿರುದ್ದ ಧ್ವನಿ ಎತ್ತಿದ್ದರು. ಈ ರೀತಿ ಧ್ವನಿ ಎತ್ತುವವರ ಸಂಖ್ಯೆ ಹೆಚ್ಚಳವಾಗಬೇಕಿದೆ.

ತುಳುನಾಡಿನ ಕಲಾವಿದರು, ಬರಹಗಾರರು, ಸಾಂಸ್ಕೃತಿಕ ರಂಗದ ಗಣ್ಯರು, ಕುಲೀನ ವಲಯದ ಜನಗಳು ಈ ಮೊದಲೇ ಧ್ವನಿ ಎತ್ತಬೇಕಿತ್ತು. ಈ ವಲಯದ ಮೌನ ಕೋಮು ಕಿರಾತಕರಿಗೆ ತುಳುನಾಡಿನ ಬೀದಿಗಳನ್ನು ರಕ್ತ ಸಿಕ್ತಗೊಳಿಸಲು ಸುಲಭವಾಗಿದೆ ಎಂಬ ಮಾತುಗಳು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ.

ದ್ವೇಷ, ಪ್ರತೀಕಾರಗಳಿಗೆ ತಮ್ಮ ಮಕ್ಕಳನ್ನು ಕಳೆದುಕೊಂಡ ಅಮ್ಮಂದಿರ ಆಕ್ರಂದನ, ವಿಧವೆಯರ ರೋಧನ, ಅನಾಥರಾದ ಮಕ್ಕಳ ಚೀರಾಟವು ಇನ್ನಾದರೂ ‘ಬುದ್ಧಿವಂತ ಜಿಲ್ಲೆಯ’ ಕಿವಿಯ ತಮಟೆಗೆ ಬಡಿಯುತ್ತದಾ? ಆ ಮೂಲಕ ಇನ್ನಾದರೂ ಜನರು ಎಚ್ಚೆತ್ತುಕೊಳ್ಳುವರಾ ಎಂದು ಕಾದುನೋಡಬೇಕಿದೆ.

WhatsApp Image 2025 05 08 at 16.45.05 70e5a46e
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

5 COMMENTS

  1. IF HE IS INNOCENT THEN OK BUT IN TODAY I HAVE SEEN HIS VEDIO HITTING THREE HINDUS WITH HIS FRIENDS ABOUT THE SAND DISPUTE IT IS TWO MONTH OLD NEWS THEY SHOWN TODAY AND ABDUL RAHEMAN HITTING THE PERSON WHO IS SITTING ON BIKE. THIS WAS PURELY PERSONAL REVENGE AND NOT COMMUNAL ISSUE. POLICEWILL ENQUIRY IT

  2. 😂😂😂 ಆತ ಒಳ್ಳೆಯವನು ಆಗಿದ್ರೆ ಅವನನ್ನ ಸಾಯಿಸ್ತೀತ್ತಿರಲಿಲ್ಲ ಜನ ಅಷ್ಟಕ್ಕೂ ಹಿಂದೂಗಳು ಮುಗ್ದರ ಮೇಲೆ ದಾಳಿ ಮಾಡಲಾರರು ಈ ಕತೆ ನಾ ನಿನ್ನ ಮತಾಂದ ಜನಕ್ಕೆ ಹೇಳು ನಮಗೆ ಯೋಚಿಸುವ ಶಕ್ತಿ ಇದೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X