ಹೆಣ್ಣು ಮಕ್ಕಳ ಶಿಕ್ಷಣವು ಪದವಿಪೂರ್ವ ಹಾಗೂ ಪದವಿ ಹಂತಗಳಿಗೆ ಸೀಮಿತವಾಗದೆ ಶೈಕ್ಷಣಿಕ ಪ್ರಗತಿಯ ಜೊತೆಗೆ ಉನ್ನತ ಮಟ್ಟದ ಸಾಧನೆಯನ್ನು ಮಾಡುವಂತಾಗಬೇಕು ಎಂದು ಅನುಗ್ರಹ ಸಂಸ್ಥೆಯ ಸಂಚಾಲಕ ಅಮಾನುಲ್ಲಾ ಖಾನ್ ತಿಳಿಸಿದರು.
ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ ವಿದ್ಯಾರ್ಥಿನಿಯರಿಗೆ ಮತ್ತು ಪೋಷಕರಿಗೆ ದಿಕ್ಸೂಚಿ ಮತ್ತು ಪಿಯುಸಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳಾ ಶಿಕ್ಷಣ ಉನ್ನತ ಮಟ್ಟಕ್ಕೆ ಹೋದಾಗ ಮಾತ್ರ ಸಮ ಸಮಾಜದ ಅಭಿವೃದ್ಧಿ ಸಾಧ್ಯ” ಎಂದರು. ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ತಮ್ಮ ಕಡೆಯಿಂದ ಪ್ರೋತ್ಸಾಹ ಧನವನ್ನು ಘೋಷಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ.ಹೇಮಲತ, “ಅನುಗ್ರಹ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿ ಕೊಡುತ್ತದೆ” ಎಂದು ತಿಳಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ತಾರಾಕ್ಷಿಯವರ ಮೇಲ್ನೋಟದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬಹುಮಾನ ಸ್ವೀಕರಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಬಂಟ್ವಾಳ | ಯುವಕ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಮೂವರು ಪೊಲೀಸ್ ವಶಕ್ಕೆ
ಕಾರ್ಯಕ್ರಮದಲ್ಲಿ ಅನುಗ್ರಹ ಸಂಸ್ಥೆಯ ಪದವಿ ಪೂರ್ವ ಮತ್ತು ಪದವಿಯ ಸಂಯೋಜಕಿ ಮಮಿತಾ ಎಸ್ ರೈ ಹಾಗೂ ಆಬಿದಾ, ಸಲೀಮಾ, ಶಫೀಕ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಉಪನ್ಯಾಸಕಿ ಕು. ತಶ್ರೀಫ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಚೈತ್ರ, ವಾಣಿಜ್ಯ ವಿಭಾಗದ ಉಪನ್ಯಾಸಕಿ ನವ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.