ಹಾಸನದಲ್ಲಿ ಬಾನು-ಭಾಸ್ತಿಗೆ ಸನ್ಮಾನ | ಸಾಹಿತ್ಯ ಲೋಕದ ಆತ್ಮವಿಮರ್ಶೆಗೆ ಬೂಕರ್‌ ಸಾಧನ: ಬರಗೂರು

Date:

Advertisements

ಕನ್ನಡದ ವಿಮರ್ಶೆಯ ಆತ್ಮವಿಮರ್ಶೆಗೆ ಬೂಕರ್ ಪ್ರಶಸ್ತಿ ಪ್ರೇರಣೆಯಾಗಬೇಕು. ಬಹುತೇಕ ಲೇಖಕರ ಬಗ್ಗೆ ಸರಿಯಾದ ವಿಮರ್ಶೆ ಬಂದಿಲ್ಲ. ಸಾಹಿತ್ಯ ಲೋಕ ಆತ್ಮವಿಮರ್ಶೆ ಮಾಡಿಕೊಳ್ಳಲು ಬಾನು ಮುಷ್ತಾಕ್‌ ಪಡೆದಿರುವ ಬೂಕರ್‌ ಪ್ರಶಸ್ತಿ ಸಾಧನವಾಗಲಿ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಬೂಕರ್ ಪ್ರಶಸ್ತಿ ಪಡೆದಿರುವ ಬಾನು ಮುಷ್ತಾಕ್‌ ಹಾಗೂ ದೀಪಾ ಭಾಸ್ತಿ ಅವರಿಗೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

“1976ರಲ್ಲಿ ಮೊದಲ ಕಥಾಸಂಕಲನಕ್ಕೆ ನನಗೆ ಮೊದಲ ಪ್ರಶಸ್ತಿ ಬಂತು. ನಂತರ ಚಳವಳಿಗಳಲ್ಲಿ ಸೇರಿಕೊಂಡಿದ್ದರಿಂದ ಪ್ರಶಸ್ತಿಗಳು ಬರಲೇ ಇಲ್ಲ. ನಮ್ಮನ್ನು ಅನುಮಾನದಿಂದ ನೋಡಿದರೇ ಹೊರತು, ಸಾಹಿತ್ಯವನ್ನು ನೋಡಲಿಲ್ಲ. ಇಂಗೆಂಡ್‌ನಲ್ಲಿ ನಮ್ಮ ನೆಂಟರು, ಸಂಬಂಧಿಕರು ಇರದೇ ಇರುವುದರಿಂದ ಪ್ರಶಸ್ತಿ ಬಂದಿದೆ ಎಂದು ಹಾಸ್ಯವಾಗಿ ನುಡಿದ ಅವರು, ಚಳವಳಿ ಮಾಡಿದವರೂ ಒಳ್ಳೆಯ ಸಾಹಿತ್ಯ ಬರೆಯಬಲ್ಲರು ಎಂಬುದು ಬೂಕರ್ ಪ್ರಶಸ್ತಿಯಿಂದ ಸಾಬೀತಾಗಿದೆ” ಎಂದರು.

Advertisements

“ಚಳವಳಿಗಳಿಂದ ಬಂದವರ ಸಾಹಿತ್ಯವನ್ನು ಸರಿಯಾಗಿ ವಿಮರ್ಶೆ ಮಾಡಲಾಗಿದೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಲೇಬೇಕಾಗಿದೆ. ಜಾತಿ, ಧರ್ಮ, ಪಂಥ, ಪಕ್ಷ ಎಲ್ಲದಕ್ಕೂ ಒಳವಿಮರ್ಶಕರು ಬೇಕಾಗಿದ್ದಾರೆ. ನಿಜವಾದ ಸಂಸ್ಕೃತಿ, ಸಾಹಿತ್ಯ ಸದಾ ಚಲನಶೀಲವಾದದ್ದು. ಗಾಂಧಿ, ವಿವೇಕಾನಂದ ಹಿಂದೂ ಧರ್ಮದ ಒಳವಿಮರ್ಶಕರಾಗಿದ್ದರು. ಬಾನು ಮುಷ್ತಾಕ್‌ ಅವರು ತಮ್ಮನ್ನು ಒಳವಿಮರ್ಶಕಿ ಅಂತ ಭಾವಿಸಿರುವುದು ಒಳ್ಳೆಯದು. ಜಡತೆ ಮೀರಿದ ಚಲನಶೀಲತೆ ಬೇಕು. ಅದಕ್ಕಾಗಿ ಜಾತಿ, ಧರ್ಮ, ಪಂಥಗಳಲ್ಲಿ ಒಳವಿಮರ್ಶೆ ಬೇಕಾಗಿದೆ. ಪ್ರಭುತ್ವಕ್ಕೆ ಸಾಹಿತಿಗಳು ಯಾವತ್ತೂ ವಿಮರ್ಶಕರೇ. ಆ ವಿವೇಕ, ಒಳವಿಮರ್ಶೆ, ಪ್ರಜಾಸತ್ತಾತ್ಮಕ ಸಂವಾದ ಉಳಿದಾಗ ಮಾತ್ರ ದೇಶ ಉಳಿಯುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೂಕರ್‌ ಪ್ರಶಸ್ತಿ ಸಂಭ್ರಮೋತ್ಸವದಲ್ಲಿ ಮೆರವಣಿಗೆ

“ಬೂಕರ್‌ ಪ್ರಶಸ್ತಿ ಬಂದ ಬಳಿಕ ಓದುಗರ ಸಂಖ್ಯೆ ಹೆಚ್ಚಾಗಿರುವುದು ಸಂತೋಷದ ಸಂಗತಿ. ಬಾನು ಮುಷ್ತಾಕ್‌ ಅವರು ಬರೆದ ಕತೆಗಳಿಂದ ಹಾಗೂ ದೀಪಾ ಭಾಸ್ತಿ ಅವರ ಅನುವಾದದಿಂದ ಇದೆಲ್ಲ ಕೀರ್ತಿ ಬಂದಿದೆ” ಎಂದು ಹೇಳಿದರು.

“ಪರ ವಿಚಾರ, ಪರ ಧರ್ಮ, ಪರ ವ್ಯಕ್ತಿಗಳನ್ನು ಸಹಿಸುವ ಗುಣ ಹೆಚ್ಚಾಗಿ ಬೆಳೆಯಲಿ. ಬಾನು ಮುಷ್ತಾಕ್‌ ಅವರಿಗೆ ಆಶ್ರಯ ಬೇಕೆ ಎಂದು ಅವರನ್ನು ಕೇಳಿದಾಗ, ‘ಎಲ್ಲ ದೇಶಗಳಲ್ಲಿ ಸಮಸ್ಯೆಗಳಿವೆ. ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನಾನು ಭಾರತದಲ್ಲಿಯೇ ಇರುತ್ತೇನೆ’ ಅಂತ ಅವರು ಹೇಳಿದರಲ್ಲ, ಅದು ನಿಜವಾದ ದೇಶ ಭಕ್ತಿ” ಎಂದು ಶ್ಲಾಘಿಸಿದರು.

“ಮೊಟ್ಟ ಮೊದಲ ಕನ್ನಡ ಶಾಸನ ಸಿಕ್ಕಿದ್ದು ಹಾಸನದಲ್ಲಿ. ಅದೇ ರೀತಿ ಕನ್ನಡಕ್ಕೆ ಮೊದಲ ಬೂಕರ್‌ ಪ್ರಶಸ್ತಿ ದೊರೆತಿರುವುದು ಹಾಸನ ಜಿಲ್ಲೆಯಿಂದಲೇ. ಹೀಗಾಗಿ ಹಾಸನ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕನ್ನಡ ಸಾಹಿತ್ಯ ಕೊಟ್ಟಿರುವ ವೈಚಾರಿಕ ವಿಸ್ತಾರವನ್ನು ಮತ್ತಷ್ಟು ವಿಸ್ತರಿಸಿದ್ದು ಚಳವಳಿಗಳು. ಸಾಹಿತ್ಯ ಮನೋಧರ್ಮ ಬದಲಿಸಲು ಒತ್ತು ಕೊಟ್ಟಿವೆ. ಅಂತಹ ಚಳವಳಿಗಳ ಒಡನಾಡಿಯಾಗಿರುವ ಬಾನು ಮುಷ್ತಾಕ್‌ ಅವರಿಗೆ ಪ್ರಶಸ್ತಿ ಬಂದಿರುವುದು ನಾಡಿನ ಚಳವಳಿಗಳಿಗೆ ಸಿಕ್ಕಿರುವ ಗೌರವ” ಎಂದರು.

“ನಾವಷ್ಟೇ ಶ್ರೇಷ್ಠವೆಂಬ ಆತ್ಮರತಿಯೂ ಇರಬಾರದು. ವಿವಿಧ ಕಾರಣಗಳಿಗೆ ಸಮೂಹ ಸನ್ನಿಯೊಂದು ನಮ್ಮನ್ನು ಆವರಿಸುತ್ತಿದೆ. ಇದು ವಿವೇಕವನ್ನು ಕಳೆದು, ಭಾವೋದ್ವೇಗವನ್ನು ಸೃಷ್ಟಿಸುತ್ತಿದೆ. ಉನ್ಮಾದವು ಸಂವಾದವನ್ನು ನುಂಗಿ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಬಾನು ಅವರಿಗೆ ಸಂದ ಪ್ರಶಸ್ತಿ ಕನ್ನಡದ ವಿವೇಕಕ್ಕೆ ಸಂದ ಪ್ರಶಸ್ತಿ” ಎಂದು ಹೇಳಿದರು.

Screenshot 2025 06 09 16 18 29 06 99c04817c0de5652397fc8b56c3b3817

“ಕವಿರಾಜಮಾರ್ಗ ಕನ್ನಡದಲ್ಲಿ ಲಭ್ಯವಾದ ಮೊದಲ ಗ್ರಂಥ. ಕ್ರಿ.ಶ. 850ರಲ್ಲಿ ಕನ್ನಡದ ಒಬ್ಬ ದಾರ್ಶನಿಕ ಆಡಿದ ಮಾತು ಈಗಲೂ ಪ್ರಸ್ತುತವಾಗಿದೆ. ಇದು ಶೋಚನೀಯವೂ ಹೌದು, ಸಂತಸದ ಸಂಗತಿಯು ಹೌದು. ಸಹಿಷ್ಣುತೆ, ಸೌಹಾರ್ದ ಇಂದು ಬೇಕಾಗಿದೆ. ಪಂಪನು ಮನುಷ್ಯ ಜಾತಿ ತಾನೊಂದು ವಲಂ ಎಂದು ಹೇಳಿದ. ಎಲ್ಲವನ್ನೂ ಸಹಿಸುವ ಪ್ರಜಾಸತ್ತಾತ್ಮಕ ಮಾರ್ಗದಿಂದ ಕನ್ನಡದ ವಿವೇಕವನ್ನು ವಿಸ್ತರಿಸಲು ಸಾಧ್ಯ” ಎಂದರು.

“ಬೂಕರ್ ಪ್ರಶಸ್ತಿ ಪಡೆಯಲು ಬಾನು ಮುಷ್ತಾಕ್‌ ಹಾಗೂ ದೀಪಾ ಭಾಸ್ತಿ ಇಬ್ಬರೂ ಬಹುಮುಖ್ಯ. ಬಾನು ಮುಷ್ತಾಕ್‌ ಅವರು ಕನ್ನಡಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟಿದ್ದಾರೆ. ಇದನ್ನು ಅನುವಾದ ಮಾಡುವ ಮೂಲಕ ಜಗತ್ತಿಗೆ ಪರಿಚಯಿಸಿದ್ದು ದೀಪಾ ಭಾಸ್ತಿ. ಇವರಿಬ್ಬರೂ ಸೇರಿ ಕನ್ನಡದ ಕೀರ್ತಿಯನ್ನು ಜಗತ್ತಿನಲ್ಲಿ ಬೆಳಗುವ ಕೆಲಸ ಮಾಡಿದ್ದಾರೆ. ಬಾನು ಮುಷ್ತಾಕ್‌ ಬರೆಯದಿದ್ದರೆ, ದೀಪಾ ಭಾಷಾಂತರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ದೀಪಾ ಅನುವಾದ ಮಾಡದಿದ್ದರೆ, ಬೂಕರ್‌ ಪ್ರಶಸ್ತಿ ಬರುತ್ತಿರಲಿಲ್ಲ. ದೀಪಾ ಭಾಸ್ತಿ ಕನ್ನಡ ಸೊಗಡನ್ನು ಬಿಡದೇ ಅನುವಾದ ಮಾಡಿರುವುದು ಮತ್ತೊಂದು ವಿಶೇಷ. ಅದು ಭಾಷಾಂತರವಲ್ಲ, ಬದಲಿಗೆ ಅದೊಂದು ಭಾವಾಂತರವಾಗಿದೆ. ಹೀಗಾಗಿ ಇಬ್ಬರನ್ನೂ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಿರುವುದು ಕನ್ನಡದ ವಿವೇಕದ ಪ್ರತೀಕ”‌ ಎಂದು ಹೇಳಿದರು.

“ಕನ್ನಡ ಸಾಹಿತ್ಯದಲ್ಲಿ ಹಲವು ಪ್ರಕಾರಗಳಿವೆ. ಆದರೆ, ಬದುಕಿನ ಆಳವಾದ ತಲ್ಲಣವನ್ನು ನಿರ್ದಿಷ್ಟವಾದ ಸಾಮಾಜಿಕ, ಆರ್ಥಿಕ ಸನ್ನಿವೇಶದಲ್ಲಿ ಪರೀಕ್ಷೆ ಮಾಡಿ, ಹೊಸದನ್ನು ಅನಾವರಣ ಮಾಡುವುದು ವಿಶೇಷ. ಅದು ಬಾನು ಮುಷ್ತಾಕ್‌ ಅವರ ವಿಶೇಷತೆ. ಕನ್ನಡ ಸಾಹಿತ್ಯಕ್ಕೆ ಹೊಸ ರೀತಿಯ ಅಭಿವ್ಯಕ್ತಿ ವಿಧಾನ ಕೊಡುತ್ತ ಹೋಗುತ್ತಿದ್ದಾರೆ. ಬಂಡಾಯ ಸಾಹಿತ್ಯ ಚಳವಳಿಯನ್ನು ಬಾನು ಮುಷ್ತಾಕ್‌ ಮತ್ತೆ ಮತ್ತೆ ಪ್ರಸ್ತಾಪಿಸಿದ್ದಾರೆ. ಬಂಡಾಯ ಸಾಹಿತ್ಯ ಚಳವಳಿಗಳ ಬಗ್ಗೆ ಬಾನು ಮುಷ್ತಾಕ್‌ ಅಭಿಮಾನ ಹೊಂದಿರುವುದು ಬಹಳ ವಿಶೇಷ. ಸೈದ್ಧಾಂತಿಕ ಸ್ಪಷ್ಟನೆ ಕೊಟ್ಟವರು ಬರಗೂರು ರಾಮಚಂದ್ರಪ್ಪ ಎಂದು ಬಾನು ಮುಷ್ತಾಕ್‌ ಅವರು ಹೇಳಿರುವುದು ಅವರ ದೊಡ್ಡತನ. ಈ ಪ್ರಶಸ್ತಿ ಚಳವಳಿಗಳು ಹಾಗೂ ಬಂಡಾಯ ಸಾಹಿತ್ಯಕ್ಕೆ ಸಿಕ್ಕ ಗೌರವ” ಎಂದರು.

“ಮುಸ್ಲಿಂ ಸಂವೇದನೆಯ ಜತೆಗೆ ಸ್ತ್ರೀಯರ ಸಂವೇದನೆಯನ್ನು ಬಾನು ಮುಷ್ತಾಕ್‌ ತೆರೆದಿಟ್ಟಿದ್ದಾರೆ. ಇದು ಈ ದೇಶದ ಮಹಿಳೆ ಅನುಭವಿಸುತ್ತಿರುವ ಸಂಕಟಗಳ ಅನಾವರಣವಾಗಿದ್ದು, ಸ್ತ್ರೀ ಸಂಕಟದ ಪ್ರತಿನಿಧೀಕರಣ” ಎಂದರು.

ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಮಾತನಾಡಿ, “ಕನ್ನಡ ಸಾಹಿತ್ಯಕ್ಕೆ, ಕನ್ನಡಿಗರಿಗೆ, ಹಾಸನಕ್ಕೆ, ಇಡೀ ರಾಜ್ಯ ಹಾಗೂ ದೇಶಕ್ಕೆ ಇದು ಸಂಭ್ರಮದ ಕ್ಷಣ. ಕನ್ನಡ ಸಾಹಿತ್ಯದ ಕೃತಿಗಳ ಸರಿಯಾದ ಭಾಷಾಂತರವಾದರೆ, ಇಡೀ ಕನ್ನಡದ ಸೊಗಡು ಜಗತ್ತಿಗೆ ಪರಿಚಯವಾಗುತ್ತದೆ. ಕನ್ನಡಕ್ಕೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಬರಲಿ” ಎಂದು ಆಶಿಸಿದರು.

ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರಿಗೆ ನಾಗರೀಕ ಸನ್ಮಾನವನ್ನು ಹಾಸನ ನಗರದ ಕಲಾ ಕ್ಷೇತ್ರದಲ್ಲಿ ಸೋಮವಾರ ಹಲವು ಸಂಘಟನೆಯವರಿಂದ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.

ಇದನ್ನೂ ಓದಿದ್ದೀರಾ? ಹಾಸನ | ಸಾಹಿತ್ಯ ಲೋಕದ ಆತ್ಮವಿಮರ್ಶೆಗೆ ಬೂಕರ್‌ ಸಾಧನ: ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ

ಗೌರವ ಉಪಸ್ಥಿತಿ ವಹಿಸಿದ್ದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, “ಇಡೀ ಪ್ರಪಂಚ ಬಾನು ಮುಷ್ತಾಕ್ ಅವರನ್ನು ತಿರುಗಿ ನೋಡಿದೆ. ಬೂಕರ್ ಪ್ರಶಸ್ತಿ ಪಡೆದ ʼಎದೆಯ ಹಣತೆʼ ಪುಸ್ತಕವನ್ನೂ ಪ್ರತಿಯೊಬ್ಬರೂ ಓದಬೇಕು. ಈ ಪುಸ್ತಕದಲ್ಲಿ 12 ಕಥೆಗಳನ್ನು ಮುಂದಿಟ್ಟು ಬರೆದಿದ್ದಾರೆ. ನಮ್ಮಂತಹ ಯುವ ರಾಜಕಾರಣಿ್ಗಳು ಹಾಗೂ ಯುವಜನರು ಅವರ ಬರವಣಿಗೆಯ ಆದಿಯಲ್ಲಿ ಸಾಗೋಣ” ಎಂದರು.

“ಇದೇ ರೀತಿ ಜಿಲ್ಲಾ ಮಟ್ಟದಿಂದ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಮತ್ತೊಂದು ಕಾರ್ಯಕ್ರಮ ಆಯೋಜಿಸಿ, ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ” ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ಶಾಸಕ ಸ್ವರೂಪ್‌ ಪ್ರಕಾಶ್, ಎಸ್‌ಪಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ ಆರ್ ಪೂರ್ಣಿಮಾ ಮಾತನಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X