ಜಾತಿರಹಿತವಾಗಿ ಎಲ್ಲ ಸಮುದಾಯವನ್ನು ಒಳಗೊಳ್ಳುವುದೇ ನಿಜವಾದ ರಾಷ್ಟ್ರೀಯವಾದ. ಜಾತಿ, ಧರ್ಮದ ನಡುವೆ ದ್ವೇಷ ಬಿತ್ತುವುದು ನಕಲಿ ರಾಷ್ಟ್ರೀಯವಾದ ಎಂದು ಹಿರಿಯ ಚಿಂತಕ ಡಾ.ಜೆ.ಎಸ್.ಪಾಟೀಲ್ ಹೇಳಿದರು.
ಹುಲಸೂರ ತಾಲೂಕಿನ ಬೇಲೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಅಧ್ಯಯನ ಶಿಬಿರದಲ್ಲಿ “ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಮತ್ತು ಸಂಘಟನೆ” ಕುರಿತು ಉಪನ್ಯಾಸ ನೀಡಿದರು.
“ವಿದೇಶ ಅಕ್ರಮಣಕಾರರು ಮತ್ತು ದೇಶಿ ಪುರೋಹಿತಶಾಹಿಗಳು ಜಂಟಿಯಾಗಿ ನಡೆಸಿದ ದಾಳಿಯಿಂದ ದೇಶವನ್ನು ರಕ್ಷಿಸಲು ನೆಲಮೂಲದ ಬಹುಜನರನ್ನು ಸಂಘಟಿಸಿ ಬಸವಣ್ಣನವರು ಲಿಂಗಾಯತ ಎಂಬ ಅಸಲಿ ರಾಷ್ಟ್ರೀಯವಾದ ಚಳುವಳಿ ಹುಟ್ಟು ಹಾಕಿದರು. ಆದ್ದರಿಂದ ನಮ್ಮ ದೇಶ ಇಂದು ಬಸವತತ್ವದ ಪ್ರಕಾರ ಮುನ್ನಡೆಯದಿದ್ದರೆ ಬಸವಾದಿ ಶರಣರು ಸ್ಥಾಪಿಸಿದ ನಿಜವಾದ ರಾಷ್ಟ್ರೀಯವಾದ ನಶಿಸಬಹುದು” ಎಂದು ಕಳಕಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೇಲೂರು ವಿರಕ್ತ ಮಠದ ಶಿವಕುಮಾರ ಮಹಾಸ್ವಾಮಿ, ಅನುಭವ ಮಂಟಪದ ಸತ್ಯಕ್ಕ ತಾಯಿ ಹಾಗೂ ಬಸವೇಶ್ವರ ದೇವಸ್ಥಾನ ಪಂಚಕಮಿಟಿಯ ಪ್ರಮುಖರಾದ ನವೀನ ಗುಂಗೆ, ರಾಜಕುಮಾರ ಹಲಿಂಗೆ, ರಾಜಕುಮಾರ ಚಿಲ್ಲಾಬಟ್ಟೆ, ಬಸವರಾಜ ಬಡೂರೆ, ರಾಜಪ್ಪಾ ಗುಂಗೆ, ಶರಣಪ್ಪ ಕಣಜೆ, ಮಲ್ಲಿಕಾರ್ಜುನ ಬರಗಾಲೆ ಸೇರಿದಂತೆ ಇನ್ನಿತರರಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕವಿಗೋಷ್ಠಿಗೆ ಬಂದಿದ್ದ ಕೆನಡಾದ ಕವಿ ಹೃದಯಾಘಾತದಿಂದ ನಿಧನ
ವೈದ್ಯ ಬಸವರಾಜ ಪಂಡಿತ ಪ್ರಾರ್ಥನೆ ಗೀತೆ ಹಾಡಿದರು, ನಾಗನಾಥ ಮಹಾಜನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಪಾಟೀಲ ನಿರೂಪಿಸಿದರು, ಹುಲಸೂರ ಕಸಾಪ ಅಧ್ಯಕ್ಷ ನಾಗರಾಜ ಹಾವಣ್ಣಾ ವಂದಿಸಿದರು.