ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ರಸ್ತೆಯಲ್ಲಿನ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಪ್ರತಿಮೆ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಭಗ್ನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
ʼಈ ಘಟನೆಯಲ್ಲಿ ಯಾವುದೇ ಕಿಡಿಗೇಡಿಗಳ ಕೃತ್ಯ ಕಂಡು ಬಂದಿಲ್ಲ ಎಂಬುದನ್ನು ಪೊಲೀಸ್ ಇಲಾಖೆಯ ತನಿಖೆಯಿಂದ ಗೊತ್ತಾಗಿದೆ. ಘಟನೆ ಸಂಬಂಧ ಆರೋಪಿ ಟ್ರ್ಯಾಕ್ಟರ್ ಚಾಲಕನನ್ನು ಈಗಾಗಲೇ ಬಂಧಿಸಿ ಪ್ರಕರಣ ದಾಖಲಿಸಲಾಗಿದೆʼ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ನನಗೆ ಮಾಹಿತಿ ದೊರೆತ ಕೂಡಲೇ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಾನಿಯಾಗಿರುವ ವಿಶ್ವಗುರು ಬಸವಣ್ಣನವರ ಪ್ರತಿಮೆಯ ಸ್ಥಳದಲ್ಲಿಯೇ ಹೊಸದಾಗಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಹಾಗಾಗಿ ಜಿಲ್ಲೆಯ ಬಸವ ಭಕ್ತರು ಶಾಂತಿ ಕಾಪಾಡುವಂತೆ ಸಚಿವರು ಮನವಿ ಮಾಡಿದ್ದಾರೆ.