ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಸಂಬಂಧಿಸಿ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿರುವ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ, ” ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಆರೋಪವು ”ಆಧಾರರಹಿತ ಮತ್ತು ಸುಳ್ಳು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿ ಏಜೆನ್ಸಿ ಪಿಟಿಐಗೆ ಸಂದರ್ಶನ ನೀಡಿರುವ ವೀರೇಂದ್ರ ಹೆಗ್ಗಡೆ, “ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂದು ನಡೆಸುತ್ತಿರುವ ಎಸ್‌ಐಟಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ. ಸತ್ಯ ಎಲ್ಲರಿಗೂ ತಿಳಿಯಬೇಕು. ಈ ಸಂಬಂಧ ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಬೇಕು. ನಾವು ನಮ್ಮ ಎಲ್ಲಾ ರೀತಿಯ ಸಹಕಾರ ನೀಡುತ್ತಲೇ ಇದ್ದೇವೆ” ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
“ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ಪ್ರಕರಣವನ್ನಿಟ್ಟುಕೊಂಡು ದೇವಸ್ಥಾನದ ಹೆಸರನ್ನು ಹಾಳು ಮಾಡಲು ಕೆಲವರು ಯತ್ನಿಸುತ್ತಿರುವುದು ಕಂಡುಬಂದಿದೆ. ಅವರೆಲ್ಲರ ಹೆಸರುಗಳು ಕೂಡ ಸಾರ್ವಜನಿಕ ವಲಯದಲ್ಲಿದೆ. ಎಸ್‌ಐಟಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಅದರ ಫಲಿತಾಂಶಕ್ಕಾಗಿ ನಾವೂ ಕೂಡ ಕಾಯುತ್ತಿದ್ದೇವೆ. ದೇವಸ್ಥಾನದ ಹೆಸರನ್ನು ಹಾಳು ಮಾಡುತ್ತಿರುವವರ ಬಗ್ಗೆಯೂ ತನಿಖೆ ನಡೆಸುವುದು ಎಸ್‌ಐಟಿಯ ಕಾರ್ಯ” ಎಂದು ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಪಿಟಿಐ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ.
“ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೂಡ ಧರ್ಮಸ್ಥಳ ದೇವಸ್ಥಾನ ಮತ್ತು ಆಡಳಿತ ಮಂಡಳಿಯು ಸಿಬಿಐ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದೆ. ಆದರೆ, ಇದೇ ಪ್ರಕರಣವನ್ನಿಟ್ಟುಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಸೋಷಿಯಲ್ ಮೀಡಿಯಾಗಳ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿವೆ” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದ ಕರ್ನಾಟಕ ಸರ್ಕಾರದ ‘ಶಕ್ತಿ ಯೋಜನೆ’
“ಸೌಜನ್ಯ ಪ್ರಕರಣ ನಡೆದಾಗ ನಾವೇ ಪೊಲೀಸರಲ್ಲಿ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಕೋರಿಕೊಂಡಿದ್ದೆವು. ಈ ಪ್ರಕರಣಕ್ಕೂ ಧರ್ಮಸ್ಥಳಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ನಮ್ಮ ಕುಟುಂಬದ ಸದಸ್ಯರ ಮೇಲೆಯೇ ಹಾಕಲಾಯಿತು. ಆರೋಪ ಕೇಳಿಬಂದ ಕುಟುಂಬದ ಸದಸ್ಯ ಆ ಸಂದರ್ಭದಲ್ಲಿ ನಮ್ಮ ದೇಶದಲ್ಲೇ ಇರಲಿಲ್ಲ. ಅವರು ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಅಮೇರಿಕಾದಲ್ಲಿದ್ದರು. ಸೌಜನ್ಯ ಪ್ರಕರಣದಲ್ಲಿ ನಮ್ಮ ಕುಟುಂಬ ಮೇಲಿನ ಆರೋಪಗಳೆಲ್ಲವೂ ಸುಳ್ಳು. ಆರೋಪಗಳೆಲ್ಲವೂ ಆಧಾರರಹಿತ ಮತ್ತು ನಮ್ಮ ವಿರುದ್ಧ ಅಪಪ್ರಚಾರದ ಭಾಗವಾಗಿದೆ” ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
