- ಆರೋಪಿ ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನ
- ‘ಸ್ಟೇಷನ್ ಬೇಲ್’ನ ಮೇಲೆ ಬಿಟ್ಟು ಕಳುಹಿಸಿದ್ದ ಪೊಲೀಸರು
ಮಂಗಳೂರಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರ ವಶದಲ್ಲಿದ್ದ ಬಳಿಕ ಬಿಡುಗಡೆಗೊಂಡಿದ್ದ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬೆನ್ನಲ್ಲೇ, ಆರೋಪಿ ಸಂಘಪರಿವಾರದ ಕಾರ್ಯಕರ್ತನ ಮೇಲೆ ಎಫ್‌ಐಆರ್ ದಾಖಲಾಗಿದೆ.
ಬಂಧಿತ ಯುವಕನನ್ನು ಮುಲ್ಕಿ ಸಮೀಪದ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂದು ಗುರುತಿಸಲಾಗಿದೆ.
‘ಶೌಚಾಲಯಕ್ಕೆ ಹೋಗಿದ್ದಾಗ ಮೊಬೈಲ್ ಇಟ್ಟು ವಿಡಿಯೋ ಸೆರೆ ಹಿಡಿದಿರುವುದಾಗಿ ಪ್ರಜ್ವಲ್ ಎಂಬವರು ದೂರು ನೀಡಿದ್ದಾರೆ. ಆ ದೂರಿನನ್ವಯ ಐಪಿಸಿ 354 ಸಿ ಐಪಿಸಿ ಮತ್ತು 66 ಇ ಐಟಿ ಕಾಯ್ದೆಯಡಿ ಆರೋಪಿ ಸುಮಂತ್ ಪೂಜಾರಿಯ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಮಹಿಳೆ ಸ್ನಾನ ಮಾಡುವಾಗ ವೀಡಿಯೊ ಚಿತ್ರೀಕರಣ : ಸಂಘಪರಿವಾರದ ಕಾರ್ಯಕರ್ತ ಬಂಧನ, ಬಿಡುಗಡೆ!
ಘಟನೆ ಏನು?
ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಹಿಂದೂ ಜಾಗರಣ ವೇದಿಕೆಯ ಸ್ಥಳೀಯ ಘಟಕದ ಸಕ್ರಿಯ ಕಾರ್ಯಕರ್ತ ಸುಮಂತ್ ಪೂಜಾರಿ ಮೊಬೈಲ್ ಇಟ್ಟಿದ್ದ. ಆದರೆ, ಯುವತಿಯ ಬದಲಾಗಿ ಯುವತಿಯ ಅಣ್ಣ ಬಚ್ಚಲು ಮನೆಗೆ ಸ್ನಾನಕ್ಕಾಗಿ ಬಂದಿದ್ದ. ಇದೇ ವೇಳೆ ವಿಡಿಯೋ ರೆಕಾರ್ಡಿಂಗ್‌ಗೆ ಇಟ್ಟಿದ್ದ ಮೊಬೈಲ್ ಅನ್ನು ತೆಗೆಯಲೆಂದು ಸುಮಂತ್ ಬಂದಾಗ ಏನೋ ಶಬ್ದವಾಗಿದೆ. ಬಳಿಕ ಮೊಬೈಲ್ ಇರುವುದನ್ನು ಗಮನಿಸಿದ ಯುವತಿಯ ಅಣ್ಣ, ರೆಡ್ ಹ್ಯಾಂಡ್ ಆಗಿ ಹಿಡಿದು ಆರೋಪಿ ಸುಮಂತ್ನನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಆ ಬಳಿಕ ಪೊಲೀಸರು ‘ಸ್ಟೇಷನ್ ಬೇಲ್’ನ ಮೇಲೆ ಬಿಟ್ಟು ಕಳುಹಿಸಿದ್ದಾರೆ ಎಂದೂ ವರದಿಯಾಗಿತ್ತು. ಸಂಘಪರಿವಾರದ ನಾಯಕರ ಒತ್ತಡಕ್ಕೆ ಮಣಿದ ಪೊಲೀಸರು, ಯುವಕನ ವಿರುದ್ಧ ಠಾಣೆಯಲ್ಲೇ ಜಾಮಿನು ನೀಡಬಹುದಾದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು ಎನ್ನಲಾಗಿತ್ತು.
ಘಟನೆ ಕಳೆದ ಬುಧವಾರ ರಾತ್ರಿ 11 ಗಂಟೆಗೆ ನಡೆದಿದ್ದು, ಶುಕ್ರವಾರ ತಡವಾಗಿ ಬೆಳಕಿಗೆ ಬಂದಿತ್ತು. ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬೆನ್ನಲ್ಲೇ, ಆರೋಪಿಯನ್ನು ಮತ್ತೆ ಬಂಧಿಸಿ, ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.