- ಬಿಬಿಎಂಪಿಯ ಎಲ್ಲ 8 ವಲಯಗಳಲ್ಲಿ ವೇಗ ಪಡೆದುಕೊಂಡ ರಸ್ತೆ ದುರಸ್ತಿ ಕಾರ್ಯ
- ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ ಕೆ ಶಿವಕುಮಾರ್ ಆದೇಶ ಹಿನ್ನೆಲೆ
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರ ಆದೇಶ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಿರ್ದೇಶನ ನೀಡಿರುವುದರಿಂದ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ವೇಗ ಪಡೆದುಕೊಂಡಿದೆ.
ಕಳೆದ ಎರಡು ದಿನಗಳಿಂದ ನಗರದ ಹಲವು ರಸ್ತೆಗಳ ದುರಸ್ತಿ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಹಗಲು-ರಾತ್ರಿ ಎನ್ನದೆ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಬಿಬಿಎಂಪಿ ಅಧಿಕಾರಿಗಳು ನಿರತರಾಗಿದ್ದಾರೆ.

ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಯನ್ನು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಖುದ್ದು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ಏಪ್ರಿಲ್ 1ರಿಂದ ಈವರೆಗೆ ನಾಲ್ಕು ಸಾವಿರ ಗುಂಡಿ ಮುಚ್ಚಲಾಗಿದೆ. ಇನ್ನೂ ಎರಡು ಸಾವಿರ ಗುಂಡಿಗಳನ್ನು ಮುಚ್ಚಲು ಬಾಕಿ ಉಳಿದಿವೆ. ‘ರಸ್ತೆ ಗುಂಡಿ ಗಮನ’ ಆ್ಯಪ್‌ನಲ್ಲಿ ಸುಮಾರು 1,600 ದೂರುಗಳು ಬಂದಿವೆ. ಅದರಲ್ಲಿ ಒಂದು ಸಾವಿರ ರಸ್ತೆ ಗುಂಡಿಗಳಾಗಿವೆ” ಎಂದು ತಿಳಿಸಿದರು.
“ಪ್ರಮುಖ ರಸ್ತೆಗಳನ್ನು ಗುಂಡಿ ಮುಕ್ತವಾಗಿಸಲು ಪ್ರತಿ 5 ಕಿ.ಮೀಗೆ ಒಬ್ಬ ಎಂಜಿನಿಯರ್ ನೇಮಿಸಲಾಗಿದೆ. ಇದರ ಮೇಲ್ವಿಚಾರಣೆಯನ್ನು ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರಿಗೆ ವಹಿಸಲಾಗಿದೆ. ವಾರ್ಡ್ ರಸ್ತೆಗಳ ನಿರ್ವಹಣೆಗೂ ನೋಡಲ್ ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಪ್ರಮುಖ ರಸ್ತೆಗಳನ್ನು ಹಲವು ವರ್ಷಗಳಿಂದ ದುರಸ್ತಿ ಮಾಡಿಲ್ಲ. 459 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಲ್ಲಿ ₹660 ಕೋಟಿ ವೆಚ್ಚದಲ್ಲಿ ಮೇಲ್ಫದರದ ಡಾಂಬರೀಕರಣ ಮಾಡಲಾಗುತ್ತದೆ. ಅಕ್ಟೋಬರ್‌ನಲ್ಲಿ ಕಾರ್ಯಾದೇಶ ನೀಡಿ, ಒಂದೆರಡು ತಿಂಗಳಲ್ಲಿ ಈ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತದೆ ಎಂದರು.
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆ, ಮಳೆ ನೀರು ಹರಿಯಲು ಕ್ರಮ ವಹಿಸುವಂತೆ, ರಸ್ತೆ ಸುಸ್ಥಿತಿಯಲ್ಲಿಡುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಈ ವೇಳೆ ಉಪಸ್ಥಿತರಿದ್ದರು.
ಅಮಾನತು ಎಚ್ಚರಿಕೆ
“ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತು ಮಾಡಲಾಗುವುದು” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಅಪಘಾತದ ವೇಳೆ ತಾಯಿಯನ್ನು ರಕ್ಷಿಸಿದ್ದ ಬಾಲಕಿಗೆ ಜಿಲ್ಲಾಧಿಕಾರಿ ಸನ್ಮಾನ
ಇದರಿಂದಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯ ಎಲ್ಲ ಎಂಟು ವಲಯದ ಅಧಿಕಾರಿಗಳು, ಹಗಲು-ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇಂದು ರಾಜರಾಜೇಶ್ವರಿ ನಗರ ವಲಯ ಪಂತರಪಾಳ್ಯ-ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ವಲಯ ಜಂಟಿ ಆಯುಕ್ತರಾದ ಅಜಯ್‌ರವರ ನೇತೃತ್ವದಲ್ಲಿ ನಡೆಯಿತು.
ಸ್ಥಳದಲ್ಲಿ ಮುಖ್ಯ ಅಭಿಯಂತರರಾದ ಸ್ವಯಂಪ್ರಭಾ, ಕಾರ್ಯಪಾಲಕ ಅಭಿಯಂತರಾದ ಪಾಪರೆಡ್ಡಿ, ಆರಿಫ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
