ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ರಸ್ತೆ, ಸಬ್ ಆರ್ಟಿರಿಯಲ್ ರಸ್ತೆಗಳಿಗೆ ಮೊದಲ ಆದ್ಯತೆ ನೀಡಿ ಮಳೆ ಪ್ರಾರಂಭವಾಗುವುದಕ್ಕೂ ಮುನ್ನ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚನೆ ನಿಡಿದರು.
ಮಳೆಯಾಗುವ ಸಂದರ್ಭದಲ್ಲಿ ಕೋಲ್ಡ್ ಮಿಕ್ಸ್ ಬಳಸಿಕೊಂಡು ರಸ್ತೆಗುಂಡಿಗಳನ್ನು ಮುಚ್ಚಬೇಕು. ಡಾಂಬರೀಕರಣ ಕೈಗೆತ್ತಿಕೊಂಡಿರುವ ರಸ್ತೆಗಳಿಗೆ ತ್ವರಿತಗತಿಯಲ್ಲಿ ಡಾಂಬರೀಕರಣ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾಯಿ ಲೇಔಟ್ ಸಮಸ್ಯೆ ಬಗೆಹರಿಸಿ:
ಸಾಯಿ ಲೇಔಟ್ ನಲ್ಲಿ ಜಲಾವೃತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈಗಾಗಲೇ ಜಾಕ್ ವೆಲ್ ನಿರ್ಮಾಣ ಮಾಡಿದ್ದು, ಅದರ ಮೂಲಕ ನೀರನ್ನು ಹೊರ ಹಾಕುವ ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ ಪಾಲಿಕೆ ವತಿಯಿಂದ ಪಂಪ್ ಸೆಟ್ ಗಳನ್ನು ಸ್ಥಳದಲ್ಲಿ ಶಾಶ್ವತವಾಗಿಟ್ಟು, ಜಲಾವೃತವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಇನ್ನು ರೈಲ್ವೆ ವೆಂಟ್ ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಪೂರ್ಣಗೊಳಿಸುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ನಗರಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಪ್ರವಾಹಪೀಡಿತ ಪ್ರದೇಶಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ಆ ಸ್ಥಳದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದಕ್ಕೆ ಶಾಶ್ವತ ಪರಿಹಾರ ನೀಡಿ ಯಾವುದೇ ರೀತಿಯ ಸಮಸ್ಯೆಗಳಾಗಂದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸಣ್ಣ ಅರಣ್ಯಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಬೇಕು. ಈ ಸಂಬಂಧ ಸ್ಥಳಗಳನ್ನು ಗುರುತಿಸಿದ ಬಳಿಕ ಸಣ್ಣ ಅರಣ್ಯ ನಿರ್ಮಾಣ ಮಾಡಲು ಸೂಕ್ತ ಕ್ರಮಗಳನ್ನು ವಹಿಸಲು ಸೂಚಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ, ಬೀದಿ ದೀಪ, ರಸ್ತೆ ಗುಂಡಿ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಹಾಯವಾಣಿ ಸಂಖ್ಯೆ, ವ್ಯಾಟ್ಸಪ್ ಸಂಖ್ಯೆಗೆ, ಸಹಾಯ 2.0 ಗೆ ಬರುವ ದೂರುಗಳಿಗೆ ಸ್ಪಂದಿಸಿ ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ದುರಂತ | ಹೈಕೋರ್ಟ್‌ಗೆ ವರದಿ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದ ಸರ್ಕಾರ
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ನವೀನ್ ಕುಮಾರ್ ರಾಜು, ವಲಯ ಆಯುಕ್ತರಾದ ಸತೀಶ್, ರಮ್ಯಾ, ಕರೀಗೌಡ, ರಮೇಶ್, ಸ್ನೇಹಲ್, ದಿಗ್ವಿಜಯ್ ಬೋಡ್ಕೆ, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಪ್ರಹ್ಲಾದ್, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.