ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಹಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳಿಗೆ ಪ್ರಾಣಿ ಕಾರ್ಯಕರ್ತರು, ಎನ್‌ಜಿಒ ಸ್ವಯಂಸೇವಕರು ಹಾಗೂ ನಾಗರಿಕ ಸಮುದಾಯಗಳಿಂದ ಮಿತ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾರ್ಗಸೂಚಿಗಳು ಆಹಾರ ನೀಡುವವರ ಸಾಮರ್ಥ್ಯವನ್ನು ಪ್ರಶ್ನಿಸುತ್ತದೆ ಎಂದಿರುವ ಪ್ರಾಣಿಪ್ರಿಯರು, ಪ್ರಾಣಿಗಳ ಆಹಾರಕ್ಕಾಗಿ ಬಿಬಿಎಂಪಿ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು, ಎನ್‌ಜಿಒ ವಾಲೆಂಟಿಯರ್‌ಗಳು ಮಾರ್ಗಸೂಚಿಗಳನ್ನು ಸ್ವಾಗತಿಸಿದ್ದು, ‘ಇದು ಸಾಕುಪ್ರಾಣಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಪ್ರಾಣಿಗಳ ಆರೈಕೆ ಮತ್ತು ಸಾರ್ವಜನಿಕರ ನಡುವಿನ ಸಮತೋಲನವನ್ನು ನಿರ್ವಹಿಸುತ್ತದೆ’ ಎಂದಿದ್ದಾರೆ.
ಗುರುವಾರ ಪರಿಚಯಿಸಲಾದ ಮಾರ್ಗಸೂಚಿಗಳಲ್ಲಿ ನಿಗದಿತ ಆಹಾರ ವಲಯಗಳನ್ನು ಗುರುತಿಸಲಾಗಿದೆ. ಆಹಾರ ನೀಡಿದ ಬಳಿಕ ಸ್ಥಳಗಳನ್ನು ಶುಚಿಗೊಳಿಸಬೇಕು. ಬೆಳಿಗ್ಗೆ 5 ಗಂಟೆಯ ನಂತರ ಮತ್ತು ರಾತ್ರಿ 11.30ರ ಮೊದಲು ಪ್ರಾಣಿಗಳಿಗೆ ಆಹಾರ ನೀಡಬೇಕು ಎಂಬುದು ಸೇರಿದಂತೆ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ.
ಈ ಮಾರ್ಗಸೂಚಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಭೂಮಿ ಎನ್‌ಜಿಒದ ಸಂಯೋಜಕಿ ದಿಶಾ ಗಾರ್ಗೆ, “ಬಿಬಿಎಂಪಿಯ ಮಾರ್ಗಸೂಚಿಗಳು ಪ್ರಾಣಿಗಳ ಆಹಾರ ಪ್ರಕ್ರಿಯೆಯನ್ನು ನಿರ್ವಹಿಸಲು ನೆರವಾಗುತ್ತದೆ. ಆಹಾರ ವಲಯಗಳನ್ನು ಗೊತ್ತುಪಡಿಸುವ ಮೂಲಕ, ನಾವು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಪ್ರೇರೇಪಿಸುತ್ತದೆ. ಪ್ರಾಣಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ” ಎಂದಿದ್ದಾರೆ.
ಆದಾಗ್ಯೂ, ಪ್ರಾಣಿ ಕಾರ್ಯಕರ್ತ ಅರುಣ್ ಪ್ರಸಾದ್ ಅವರು ಮಾರ್ಗಸೂಚಿಗಳನ್ನು ವಿರೋಧಿಸಿದ್ದಾರೆ. ”ಬಿಬಿಎಂಪಿ ಮನೆ ಬಾಗಿಲಿನಿಂದ ತ್ಯಾಜ್ಯ ಸಂಗ್ರಹಿಸುತ್ತಿರುವುದರಿಂದಾಗಿ ಪ್ರಾಣಿಗಳಿಗೆ ಆಹಾರದ ಮೂಲವೇ ಇಲ್ಲದಂತಾಗಿದೆ. ಪ್ರಾಣಿಗಳನ್ನು ಯಾರು ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾರ್ಗಸೂಚಿಗಳಲ್ಲಿ ಸ್ಪಷ್ಟತೆ ಇಲ್ಲ. ಬಿಬಿಎಂಪಿಯು ಪ್ರಾಣಿಗಳಿಗೆ ಉತ್ತಮ ಆಹಾರ ನೀಡುವಂತೆ ನೋಡಿಕೊಳ್ಳಬೇಕು” ಎಂದಿದ್ದಾರೆ.\
ಈ ಸುದ್ದಿ ಓದಿದ್ದೀರಾ?: ಪುರುಷಾಧಿಪತ್ಯದ ಕ್ರೌರ್ಯ | ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು
“ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಜನರು ತ್ಯಾಜ್ಯವನ್ನು ವಿಲೇವಾರಿ ಮಾಡುವಾಗ ಹೆಚ್ಚು ಜಾಗೃತರಾಗಿರಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಳಿಕೆ ಆಹಾರವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಅರಿವಿಲ್ಲದೆ, ಅವರು ಬೀದಿಗೆ ಚೆಲ್ಲುತ್ತಾರೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು” ಎಂದು ನವೀಶ್ ಶೆಟ್ಟಿ ಎಂಬವರು ಹೇಳಿದ್ದಾರೆ
“ಮಕ್ಕಳು ಪ್ರಾಣಿಗಳ ಬಗ್ಗೆ ಹೆಚ್ಚು ಪ್ರೀತಿ ಹೊಂದಿರುತ್ತಾರೆ. ಈ ಮಾರ್ಗಸೂಚಿಗಳು ಮಕ್ಕಳು ಪ್ರಾಣಿಗಳಿಗೆ ಆಹಾರ ನೀಡುವ ಅವಕಾಶವನ್ನು ಕಿತ್ತುಕೊಳ್ಳಬಾರದು. ಜೊತೆಗೆ, ಪ್ರಾಣಿಗಳ ಆಂಬ್ಯುಲೆನ್ಸ್‌ಗಳನ್ನು ಹೆಚ್ಚಿಸಬೇಕು” ಎಂದು ಮೃಣಾಲಿನಿ ಹೇಳಿದ್ದಾರೆ.