ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. ಪಾಲಿಕೆ ತನ್ನ ನಿಧಿಯಿಂದ ನೇರ ಲಾಭ ವರ್ಗಾವಣೆಯಡಿ ಹಾನಿಗೊಂಡ ಪ್ರತಿ ಮನೆಗೆ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲಿದೆ ಎಂದು ತಿಳಿಸಿದರು.
ಮಳೆಯಿಂದಾಗಿ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅಧಿಕ ಮನೆಗಳಿಗೆ ಹಾನಿಯಾಗಿದೆ. ಯಲಹಂಕ ವಲಯದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿಯೂ ಹಲವು ಮನೆಗಳಿಗೆ ನೀರು ನುಗ್ಗಿದೆ. ಒಟ್ಟಾಗಿ 63 ಮನೆಗಳಿಗೆ ಮಳೆ ನೀರು ನುಗ್ಗಿದೆ. ಶೀಘ್ರವೇ ಈ ಮನೆಗಳಿಗೆ ಪರಿಹಾರ ನೀಡುವಂತೆ ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ತಿಳಿಸಿದ್ದಾರೆ.
“ಕೇಂದ್ರೀಯ ವಿಹಾರದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವು ಯಲಹಂಕ ಕೆರೆಯ ಹೊರಗಿದೆ. ಸಮುಚ್ಚಯದ ಗೋಡೆಯು ಕುಸಿದು ಬಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ನೀರನ್ನು ತೆಗೆಯುವ ಕಾರ್ಯ ಮಾಡಲಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ 63 ಮನೆಗಳು ಜಲಾವೃತವಾಗಿದೆ” ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಕರ್ನಾಟಕದ 15 ಜಿಲ್ಲೆಗಳಲ್ಲಿ ಅಕ್ಟೋಬರ್ 10ರವರೆಗೂ ಧಾರಾಕಾರ ಮಳೆ: ಹವಾಮಾನ ಇಲಾಖೆ
“ಯಲಹಂಕದ ಅಪಾರ್ಟ್‌ಮೆಂಟ್ ಕೇಂದ್ರೀಯ ವಿಹಾರ ಕೆರೆ ದಂಡೆಯ ಕೆಳಗಿದೆ. ಅಲ್ಲಿ ಬಿಬಿಎಂಪಿ ಮಳೆನೀರು ಚರಂಡಿ ನಿರ್ಮಿಸಿದೆ. ಆದರೂ ಭಾರೀ ಮಳೆಯಿಂದಾಗಿ ಪ್ರದೇಶವು ಜಲಾವೃತವಾಗಿದೆ. ನಾವು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದರು.
ಶನಿವಾರ ಬೆಂಗಳೂರಿನಲ್ಲಿ 115 ಮಿ.ಮೀ ಮಳೆ ಆಗಿತ್ತು. ಭಾನುವಾರವೂ ನಗರದಲ್ಲಿ ಭಾರೀ ಮಳೆ ಸುರಿದಿದೆ.
