ಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ಕರಡಿಯೊಂದು ನಡುರಾತ್ರಿಯಲ್ಲಿ ಬಂದು ಸುತ್ತಾಡಿ ಹೋಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿ ಹನುಮಪ್ಪನ ಗುಡಿಗೆ ಶನಿವಾರ ರಾತ್ರಿ 11ಕ್ಕೆ ಕರಡಿ ಬಂದು ಓಡಾಡಿದ್ದು , ಗ್ರಾಮದ ಜನರನ್ನು ಆತಂಕಕ್ಕೀಡು ಮಾಡಿದೆ. ಕೆಲವರು ಈ ದೃಶ್ಯವನ್ನು ಮರೆಯಲ್ಲಿ ನಿಂತು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ಹನುಮನ ಗುಡಿಗೆ ಬಂದಿರುವ ಕರಡಿ ನೋಡಿ ನಾಯಿಗಳು ಶಬ್ದ ಮಾಡಲು ಆರಂಭಿಸಿವೆ. ಇದ್ಯಾವುದನ್ನೂ ಲೆಕ್ಕಿಸದೆ ಆವರಣದಲ್ಲಿ ಅಡ್ಡಾಡಿ, ನಂತರ ಗುಡಿಯಲ್ಲಿರುವ ದೀಪದಲ್ಲಿನ ಎಣ್ಣೆ ಕುಡಿದಿದ್ದು, ಈ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಊರ ಒಳಗೆ ಅದರಲ್ಲೂ ದೇವಸ್ಥಾನಕ್ಕೆ ಕರಡಿ ಬಂದು ಹೋಗಿರುವ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿರುವ ಆಂಜಿನೇಯಸ್ವಾಮಿ ದೇವಸ್ಥಾನಕ್ಕೆ ಬಂದು ಕೆಲವು ಗಂಟೆಗಳ ಕಾಲ ಅಲ್ಲಿಯೇ ಇರುವುದನ್ನು ನೋಡಿದ ಗ್ರಾಮಸ್ಥರು ರಾತ್ರಿಯಿಡೀ ಕರಡಿಯನ್ನು ಓಡಿಸಲು ಪ್ರಯತ್ನ ಪಟ್ಟರು ಆಗಿಲ್ಲ. ಈ ಕರಡಿಗೆ ಕಿವಿ ಕೇಳಿಸುವುದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದು, ಇದೇ ಕರಡಿ ಈಗಾಗಲೇ ಐದಾರು ಬಾರೀ ಗ್ರಾಮದೊಳಗೆ ನುಗ್ಗಿದೆ ಎಂದು ತಿಳಿಸಿದ್ದಾರೆ.
ಜನರು ಜೋರಾಗಿ ಕೂಗಿ, ಅರಚಾಡಿದರೂ, ನಾಯಿಗಳು ಬೊಗಳಿದರು ಸಹ ಇದ್ಯಾವುದನ್ನು ಲೆಕ್ಕಿಸದೆ ತನ್ನ ಪಾಡಿಗೆ ಅದು ರಾತ್ರಿಯಿಡೀ ಊರಿನಲ್ಲಿ ಬೀಡು ಬಿಡುತ್ತದೆ. ಹಲವು ಬಾರಿ ಇಲ್ಲಿ ಕರಡಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಿಡಿಯಲು ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಅನೇಕ ಸಲ ದೇವಸ್ಥಾನಗಳಲ್ಲಿ ವೃದ್ಧರು ಮಲಗುತ್ತಾರೆ.
ಆ ಸಮಯದಲ್ಲಿ ಯಾರೂ ಗುಡಿಯಲ್ಲಿ ಇರದಿದ್ದ ಕಾರಣ ಅಪಾಯವಾಗಿಲ್ಲ. ಸಾಮಾನ್ಯವಾಗಿ ಕರಡಿಗಳು ಹಸಿವಿನಿಂದ ಇದ್ದಾಗ, ಸಿಟ್ಟಿಗೆದ್ದಾಗ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಹೀಗಿದ್ದಾಗ ಕರಡಿ ಬಂದು ಹೋಗುವುದರಿಂದ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಗ್ರಾಮಸ್ಥರು.
ಆಹಾರ ಅರಸಿ ರಾತ್ರಿ ವೇಳೆಯಲ್ಲಿ ಗ್ರಾಮದೊಳಗೆ ನುಗ್ಗುವ ಈ ದೊಡ್ಡ ಕರಡಿಯ ಸಂಚಾರದಿಂದ ಗ್ರಾಮಸ್ಥರು ನಿದ್ದೆಗೆಟ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಚಳ್ಳಕೆರೆ ತಾಲೂಕಿನಲ್ಲಿ ದನ ಮೇಯಿಸುತ್ತಿದ್ದ ವೃದ್ಧನ ಮೇಲೆ ಕರಡಿ ದಾಳಿ ನಡೆಸಿ ಮುಖವನ್ನೆಲ್ಲಾ ಕಿತ್ತು ಹಾಕಿರುವ ಭೀಕರ ಘಟನೆ ನಡೆದಿತ್ತು. ನೋಡಲು ಸೌಮ್ಯ, ವಿಶೇಷ ಎನಿಸಿದರೂ ಬಹಳಷ್ಟು ಅಪಾಯಕಾರಿ ಪ್ರಾಣಿಯಾಗಿರುವುದರಿಂದ ಕರಡಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದು, ದೂರ ಸಾಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
