ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಅದೇ ಕಚೇರಿಯ ಅದೇ ಹುದ್ದೆಯಲ್ಲಿ ಮುಂದುವರೆಸಬಾರದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ “ಎಸ್‌ಡಿಎ ರುದ್ರಣ್ಣ ಯಡವಣ್ಣವರ ಅವರು ನವೆಂಬರ್ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ತಹಶೀಲ್ದಾರ್ ನಾಗರಾಳ, ಅಶೋಕ ಕಬ್ಬಲಿಗೇರ ಹಾಗೂ ಸೋಮು ದೊಡವಾಡೆ ಎಂಬ ವ್ಯಕ್ತಿಗಳೇ ಕಾರಣವೆಂದು ಡೆತ್‌ನೋಟ್ ಬರೆದಿದ್ದರು. ಇದರಲ್ಲಿ ತಹಶೀಲ್ದಾರ್ ಪ್ರಮುಖ(ಎ1) ಆರೋಪಿ. ಹೀಗಿರುವಾಗ ಎ1 ಆರೋಪಿಯನ್ನು ಅದೇ ಕಚೇರಿಯ ಅದೇ ಸ್ಥಾನದಲ್ಲಿ ನೇಮಕ ಮಾಡಿದ್ದರ ಹಿಂದಿನ ಉದ್ದೇಶವೆನು” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಬೇಕು: ಸತೀಶ್ ಜಾರಕಿಹೊಳಿ
“ಜಾಮೀನು ಸಿಕ್ಕ ಮಾರನೇ ದಿನವೇ ತಮ್ಮ ಕುರ್ಚಿ ಮೇಲೆ ಬಂದು ಕೂತಿದ್ದರು. ಬಳಿಕ ಜಿಲ್ಲಾಧಿಕಾರಿ ರಜೆ ಮೇಲೆ ಕಳಿಸಿದ್ದರು. ಎರಡು ತಿಂಗಳ ಒಳಗಾಗಿ ಮತ್ತೆ ಅದೇ ಹುದ್ದೆಯನ್ನು ಅವರಿಗೆ ನೀಡಿದ್ದಾರೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಇಂಥ ಸಂದರ್ಭದಲ್ಲಿ ಅವರಿಗೆ ಹುದ್ದೆ ಕೊಡುವ ಅವಶ್ಯಕತೆ ಏನು? ಈ ಕುರಿತು ಮುಖ್ಯಮಂತ್ರಿ, ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗಿದೆ” ಎಂದು ತಿಳಿಸಿದ್ದಾರೆ.