ಬೆಳಗಾವಿ ನಗರದಲ್ಲಿ ಸೆಪ್ಟೆಂಬರ್ 28ರಂದು ನಡೆಯಲ್ಲಿರುವ ಗಣೇಶ ವಿಸರ್ಜನೆಗೆ 8 ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಕಪಿಲೇಶ್ವರ ದೇವಸ್ಥಾನ ಬಳಿಯ ಹಳೆ ಮತ್ತು ಹೊಸ ಹೊಂಡ, ಜಕ್ಕೇರಿ ಹೊಂಡ, ಅನಗೋಳದ ಕೆರೆ ಸೇರಿದಂತೆ 8 ಕಡೆ ವ್ಯವಸ್ಥೆ ಮಾಡಲಾಗಿದ್ದು, ವೀಕ್ಷಿಸಲು ಬರುವವರಿಗೆ ಅನುಕೂಲವಾಗಲೆಂದು ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಧರ್ಮವೀರ ಸಂಭಾಜಿ ವೃತ್ತದಲ್ಲಿ ವೀಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ. ಗಣೇಶ ವಿಸರ್ಜನೆ ಪ್ರಕ್ರಿಯೆ ಸುಗಮವಾಗಿ ಮುಗಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ” ಎಂದು ಹೇಳಿದರು.
“ಬೆಳಗಾವಿ ನಗರದ ಬಡಾವಣೆಗಳಲ್ಲಿ 378 ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಹುತಾತ್ಮ ಚೌಕ್ನಲ್ಲಿ ಸಂಜೆ 4ಕ್ಕೆ ಮೂರ್ತಿಗಳ ಮೆರವಣಿಗೆಗೆ ಚಾಲನೆ ಸಿಗಲಿದೆ. ಅಲ್ಲಿಂದ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ ರಸ್ತೆ, ಟಿಳಕ ಚೌಕ, ಹೆಮು ಕಲಾನಿ ಚೌಕ್, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲಾಗಿದ್ದು, ಮೂರ್ತಿ ಸಾಗಿಸುವ ವಾಹನಗಳಿಗೆ ಅಡ್ಡಿಯಾಗಬಹುದಾದ ವಿದ್ಯುತ್ ಪರಿಕರಗಳನ್ನು ತೆರವುಗೊಳಿಸಲಾಗಿದೆ. ಮೆರವಣಿಗೆ ವೇಳೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಮತ್ತು ಅಗತ್ಯ ಸುರಕ್ಷತೆ ವಹಿಸಲು ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಿತ್ತೂರು ಉತ್ಸವ: ಕವಿಗೋಷ್ಠಿಗೆ ಕವನ ಆಹ್ವಾನ
“ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೆರವಣಿಗೆ ಮಾರ್ಗ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ 487 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ಚಟುವಟಿಕೆ ಮೇಲೆ ನಿಗಾ ವಹಿಸಲು 8 ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ. ಬೆಳಗಾವಿ ಮತ್ತು ಬೇರೆ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, 10 ಕೆಎಸ್ಆರ್ಪಿ ತುಕಡಿ, 8 ಸಿಎಆರ್ ತುಕಡಿಗಳನ್ನು ಬೆಳಗಾವಿ ಗಣೇಶ ವಿಸರ್ಜನೆ ಭದ್ರತೆಗಾಗಿ ಬಳಸಲಾಗುತ್ತಿದೆ” ಎಂದು ತಿಳಿಸಿದರು.