ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಪೌರಾಡಳಿತ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಮತ್ತು ಸ್ತಬ್ಧಚಿತ್ರ ಮೆರವಣಿಗೆ ಹಾಗೂ ಐಕ್ಯತಾ ಸಮಾವೇಶವನ್ನು ಜನವರಿ 26ರಿಂದ ಫೆಬ್ರವರಿ 25ರವರೆಗೆ ಹಮ್ಮಿಕೊಂಡಿದೆ.
ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಉದ್ಧೇಶದಿಂದ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಪ್ರಾರಂಭಿಸಿದ್ದು, ಆದರ್ಶ ಸಮಾಜದ ಲಕ್ಷಣಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ, ಸಮುದಾಯದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯಲಾಗುತ್ತದೆ. ನಾವು ಮೊದಲನೆಯದಾಗಿ ಕೊನೆಯದಾಗಿ ಭಾರತೀಯರೇ ಆಗಿದ್ದೇವೆಂಬ ಅಂಬೇಡ್ಕರ್ ಅವರ ಸಂದೇಶಗಳನ್ನು ಜನರಿಗೆ ಮುಟ್ಟಿಸುವುದು ಸಂವಿಧಾನ ಜಾಗೃತಿ ಜಾಥಾದ ಉದ್ಧೇಶವಾಗಿದೆ.
ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮಕ್ಕೆ ಭಾನುವಾರ ಸಂವಿಧಾನ ಜಾಗೃತಿ ಜಾಥಾ ಬಂದಿದ್ದು, ಊರಿನ ಗ್ರಾಮಸ್ಥರು, ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿಗಳು ಸಂವಿಧಾನ ಜಾಗೃತಿ ಜಾಥಾ ಮತ್ತು ಅಂಬೇಡ್ಕರ್ ಅವರ ಸ್ತಬ್ಧ ಚಿತ್ರವನ್ನು ಬರಮಾಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಗದಗ | ವೈದ್ಯರ ನಿರ್ಲಕ್ಷ್ಯ ಆರೋಪ: ಅವಳಿ ಮಕ್ಕಳು, ಬಾಣಂತಿ ಸಾವು; ಕುಟುಂಬಸ್ಥರಿಂದ ಪ್ರತಿಭಟನೆ
ಶಾಲಾ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಪ್ರಮುಖ ಜಾನಪದ ಕಲೆಯಾದ ಡೊಳ್ಳು ಕುಣಿತ ಹಾಗೂ ಕೋಲಾಟ ನೃತ್ಯದ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಗ್ರಾಮದ ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯರು ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಹಿರಿಯರು ಇದ್ದರು.