ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಶವಸಂಸ್ಕಾರಕ್ಕಾಗಿ 6 ಕಿಮೀ ದೂರ ಕಟ್ಟಿಗೆ ಸೇತುವೆ ಮೇಲೆ ಮೃತದೇಹ ಹೊತ್ತು ಸಾಗಿದ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಪ್ರವಾಹವೂ ಕಂಡುಬಂದಿದೆ. ಇದರ ನಡುವೆ ತುರ್ತು ಪರಿಸ್ಥಿತಿಗಳೂ ಕಂಡುಬರುತ್ತಿವೆ. ಕೆಲವು ದಿನಗಳ ಹಿಂದೆ ಖಾನಾಪೂರ ತಾಲೂಕಿನಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು 5 ಕಿ.ಮೀ ವರೆಗೆ ಹೊತ್ತು ಸಾಗಿದ ಸುದ್ದಿಯ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಖಾನಾಪುರ ತಾಲೂಕಿನ ಕೃಷ್ಣಾಪುರ ಗ್ರಾಮದ ಸದಾನಂದ ನಾಯಕ್ ಎಂಬುವವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರನ್ನು ಹತ್ತಿರದ ವಾಳಪೈ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ದ.ಕ | ಬೀದಿಬದಿ ವ್ಯಾಪಾರಸ್ಥರ ಮೇಲೆ ಬುಲ್ಡೋಜರ್ ದಾಳಿ; ಬಿಜೆಪಿ ದುಷ್ಕೃತ್ಯಕ್ಕೆ ಸಿಐಟಿಯು ಖಂಡನೆ
ಬಳಿಕ ಅಂತ್ಯಸಂಸ್ಕಾರಕ್ಕಾಗಿ ಶವವನ್ನು ಸಾಗಿಸುವ ಮಾರ್ಗದಲ್ಲಿ ಬರುವ ಕಳಸಾ ನಾಲಾಕ್ಕೆ ಅಡ್ಡಲಾಗಿ ಕಟ್ಟಿರುವ ಕಟ್ಟಿಗೆ ಸೇತುವೆ ಮೇಲೆ ಶವವನ್ನು ಹೊತ್ತುಕೊಂಡು ಸಾಗಿದ್ದಾರೆ. ಅರಣ್ಯದ ಮಧ್ಯದಲ್ಲಿರುವ ಕೃಷ್ಣಾಪುರ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ, ರಸ್ತೆ, ಆಸ್ಪತ್ರೆಗಳೂ ಇಲ್ಲ. ಕಾಡಿನ ಮಧ್ಯ ಗ್ರಾಮ ಇರುವುದರಿಂದ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು ಕೃಷ್ಣಾಪುರ ಸಂಪೂರ್ಣ ಗ್ರಾಮವನ್ನು ಸ್ಥಳಾಂತರಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.