ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಜೂನ್ 4ರಂದು ನಡೆಯಲಿದ್ದು, ಇದಕ್ಕಾಗಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೊಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ತಿಳಿಸಿದರು.
ಮತ ಎಣಿಕೆ ಕೇಂದ್ರವಾದ ಪಟ್ಟಣದ ಆರ್ ಡಿ ಕಾಲೇಜಿನಲ್ಲಿ ಸ್ಥಾಪಿಸಲಾದ ಮಾಧ್ಯಮ ಕೇಂದ್ರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
“ಎಂಟು ಇವಿಎಂ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿರುತ್ತದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲಿ 12 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಗಳ ಎಣಿಕೆಗೆ 16 ಟೇಬಲ್ ಹಾಗೂ ಇಟಿಪಿಬಿಎಸ್ ಮತಗಳ ಎಣಿಕೆಗೆ 2 ಕೇಂದ್ರಗಳನ್ನು ಸ್ಥಾಪಿಸಲಾಗಿದೆ” ಎಂದರು.
“ಮತ ಎಣಿಕೆಗೆ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಒಟ್ಟು 139 ಮಂದಿ ಮತ ಎಣಿಕೆ ಸೂಪರ್‌ವೈಸರ್, 158 ಮಂದಿ ಮತ ಎಣಿಕೆ ಸಹಾಯಕರು ಹಾಗೂ 139 ಮಂದಿ ಮೈಕ್ರೊ ಅಬ್ಸರ್‌ವರ್‌ಗಳನ್ನು ಹಾಗೂ 40 ಮಂದಿ ಇಟಿಪಿಬಿಎಸ್ ಮತಗಳ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಸಿಬ್ಬಂದಿ ನಿಯೋಜಿಸಲಾಗಿದೆ” ಎಂದರು.
“ಜೂನ್ 4ರ ಬೆಳಿಗ್ಗೆ 8ಕ್ಕೆ ಅಂಚೆ ಮತಗಳ ಎಣಿಕೆ ನಡೆಯಲಿದ್ದು, 8.30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ, ನಂತರ ಪ್ರತಿ ಮತಕ್ಷೇತ್ರದ 5 ವಿವಿ ಪ್ಯಾಟ್‌ಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಎಣಿಕ ಕಾರ್ಯ ಪ್ರಾರಂಬಿಸಲಾಗುವುದು” ಎಂದು ತಿಳಿಸಿದರು.
“ಮತ ಎಣಿಕೆ ಮುಗಿದ ನಂತರ ವಿದ್ಯುನ್ಮಾನ ಯಂತ್ರಗಳನ್ನು ಬೆಳಗಾವಿ ನಗರದ ಹಿಂಡಲಗಾದಲ್ಲಿನ ವೇರ್‌ಹೌಸ್‌ಗೆ ಕಳುಹಿಸಲಾಗುವುದು. ಮತ ಎಣಿಕ ಏಜೆಂಟರ್‌ಗಳು ಮೊಬೈಲ್‌ಗಳನ್ನು ಮತ ಎಣಿಕಾ ಕೇಂದ್ರದೊಳಗೆ ತರಲು ಅವಕಾಶವಿರುವುದಿಲ್ಲ” ಎಂದು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಮಾತನಾಡಿ, “ಮತ ಎಣಿಕಾ ಕಾರ್ಯವು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಸಿಬ್ಬಂದಿ ನೀಯೋಜಿಸಲಾಗಿದೆ. ಜತೆಗೆ ಜೂನ್ 1ರಿಂದ ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ; ನಿಯಮ ಪಾಲನೆಗೆ ಸಹಾಯವಾಣಿ ಸ್ಥಾಪನೆ
“ಮತ ಎಣಿಕೆ ದಿನದಂದು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ನಿಪ್ಪಾಣಿ ಮಾರ್ಗದಿಂದ ಬರುವ ವಾಹನಗಳಿಗೆ ಐಟಿಐ ಕಾಲೇಜು ಮೈದಾನದಲ್ಲಿ, ಯಕ್ಸಂಬಾ ಮಾರ್ಗದಿಂದ ಬರುವ ವಾಹನಗಳಿಗೆ ಭೀಮ ನಗರದ ಹತ್ತಿರದ ಮುನ್ಸಿಪಾಲಿಟಿ ಖಾಲಿ ಜಾಗದಲ್ಲಿ, ಅಂಕಲಿ ಮಾರ್ಗದಿಂದ ಬರುವ ವಾಹನಗಳಿಗೆ ಪರಟಿ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ಮುಲ್ಲಾ ಪ್ಲಾಟ ಖಾಲಿ ಸ್ಥಳದಲ್ಲಿ, ಹುಕ್ಕೇರಿ ಮಾರ್ಗದಿಂದ ಬರುವ ವಾಹನಗಳಿಗೆ ಪದ್ಮಾ ಮಂಗಲ ಕಾರ್ಯಾಲಯದ ಹತ್ತಿರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.
