ಸಾಲದ ಸುಳಿಗೆ ಸಿಲುಕಿ ಬೇಸತ್ತ ನೇಕಾರ ಕೂಲಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ವಾಡೇಗಲ್ಲಿಯಲ್ಲಿ ನಡೆದಿದೆ.
ಪರಶುರಾಮ ಕಲ್ಲಪ್ಪ ವಾಗೂಕರ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಪರಶುರಾಮ ಅವರು ನೇಕಾರಿಕೆ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನೇಕಾರಿಕೆಯಲ್ಲಿ ನಷ್ಟ ಮತ್ತು ಯಾವುದೇ ಲಾಭವೂ ಇರಲಿಲ್ಲ. ಈ ಕಾರಣಕ್ಕಾಗಿ ಸಾಲ ಮಾಡಿದ್ದರು. ಇದರಿಂದ ಬೇಸತ್ತಿದ್ದ ಪರಶುರಾಮ ಅವರು ಕುಟುಂಬದವರು ಯಾರೂ ಮನೆಯಲ್ಲಿ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ವಿದ್ಯುತ್ ಮಗ್ಗ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಶಂಕರ ಡವಳಿಯವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳೆದ ಮೂರ್ನಾಲ್ಕು ದಶಕಗಳಿಂದ ರಾಜ್ಯದ ವಿದ್ಯುತ್ ಮಗ್ಗದ ಕಾರ್ಮಿಕರಿಗೆ ಕಾರ್ಮಿಕ ಸೌಲಭ್ಯಗಳು ಹಾಗೂ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲದೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದೆ. ಇವರು ಅಸಂಘಟಿತ ಕಾರ್ಮಿಕರಾಗಿದ್ದಾರೆ.
ಇವರು ದಿನಪೂರ್ತಿ ದುಡಿದರೂ ದುಡಿದ ಕೂಲಿಯಲ್ಲಿಯೇ ಬದುಕಬೇಕು. ಜೀವನದಲ್ಲಿ ಬಂದ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತೆ ಆರ್ಥಿಕವಾಗಿ ಸಾಲ ಮಾಡುವುದರಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸಾರ್ವಜನಿಕರ ಎದುರಲ್ಲೇ ಹೊಡೆದಾಡಿಕೊಂಡ ಖಾಸಗಿ ಬಸ್ ಸಿಬ್ಬಂದಿ: ವಿಡಿಯೋ ವೈರಲ್
“ರಾಜ್ಯದಲ್ಲಿ ಈವರೆಗೆ 51 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಮುಖ್ಯವಾಗಿ ಬಾಡಿಗೆ ಬಂಡವಾಳದಾರರು, ಎರಡು, ನಾಲ್ಕು ಮಗ್ಗಗಳನ್ನು ಹಾಕಿಕೊಂಡ ಸಣ್ಣ, ಅತಿಸಣ್ಣ ನೇಕಾರರು ಇವರೆಲ್ಲರೂ ಕೂಡ ಕಾರ್ಮಿಕ ವರ್ಗದಲ್ಲಿ ಸೇರುತ್ತಾರೆ.
ಹಾಗಾಗಿ, ಆಡಳಿತಕ್ಕೆ ಬಂದು ಸರ್ಕಾರ ಕೇವಲ ನೇಕಾರಿಕೆ ಉದ್ಯಮಿಗೆ ಯೋಜನೆಗಳನ್ನು ರೂಪಿಸಿ ಬಿಡುಗಡೆ ಮಾಡದೆ, ಕಾರ್ಮಿಕರ ಉಳಿವಿಗಾಗಿ ಕೂಡ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು. ಅಂದಾಗ ಮಾತ್ರ ನೇಕಾರಿಕೆ ಉದ್ಯೋಗ ದೇಶದಲ್ಲಿ, ರಾಜ್ಯದಲ್ಲಿ ಉಳಿಯಲು ಸಾಧ್ಯವಿದೆ ಮತ್ತು ನೇಕಾರ ಕಾರ್ಮಿಕರ ಆತ್ಮಹತ್ಯೆಗಳನ್ನು ನಿಲ್ಲಿಸಬಹುದು” ಎಂದು ತಿಳಿಸಿದ್ದಾರೆ.