ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತಿದ್ದ ಬೆಳೆಗಳು ಒಣಗಿರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೈಲಹೊಂಗಲ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
“ತಾಲೂಕಿನಲ್ಲಿ ಈಗಾಗಲೇ ರೈತರು ಬಿತ್ತನೆ ಮಾಡಿರುವ ಬೆಳೆಗಳು ಒಣಗಿವೆ. ಮತ್ತೆ ಕೆಲವು ರೈತರು ಮಳೆಗಾಗಿ ಕಾಯುತ್ತ ಕುಳಿತಿದ್ದರು. ಇದೀಗ ಬಿತ್ತನೆಯ ದಿನಗಳು ಮುಗಿದಿವೆ. ಇದರಿಂದ ಬೆಳೆ ಸಂಪೂರ್ಣ ವಿಫಲವಾಗಿದ್ದು, ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಹಾಗಾಗಿ ರಾಮದುರ್ಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ” ಎಂದು ಆಗ್ರಹಿಸಿದರು.
“2021-22ನೇ ಸಾಲಿನ ಬರಗಾಲ ಬೆಳೆ ಪರಿಹಾರ ಕೆಲವು ರೈತರಿಗೆ ಲಭಿಸಿದ್ಧು, ಬಹಳಷ್ಟು ರೈತರಿಗೆ ದೊರೆತಿರುವದಿಲ್ಲ. ಆದ್ದರಿಂದ ಪರಿಹಾರ ವಂಚಿತ ರೈತರಿಗೆ ಪರಿಹಾರ ನೀಡಬೇಕು. ಪಶು ಆಸ್ಪತ್ರೆಗಳಿಗೆ ವೈದ್ಯಾಧಿಕರಿಗಳನ್ನು ನೇಮಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಬ್ಬು ಬೆಳೆ ಹಾನಿ; ಹಂದಿಗಳ ಹಾವಳಿಗೆ ಕಂಗಾಲಾದ ರೈತರು
ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡರುಗಳಾದ ಮಲಿಕಾರ್ಜುನ ರಾಮದುರ್ಗ, ಈರಣ್ಣ ಗೌಡ ಪಾಟಿಲ್,
ರಮೇಶ ಗುಡಿಯನ್ನವರ, ಯಲ್ಲಪ್ಪ ದೊಡ್ಡಮನಿ, ದ್ಯಾಮನ್ನ ಪೋತನ್ನವರ ಸೇರಿದಂತೆ ಬಹುತೇಕ ರೈತರು ಇದ್ದರು.