ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಗುರುವಾರ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ, ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸು ಸೇರಿ ಮನೆಯ ಎಲ್ಲರನ್ನೂ ಹೊರಗೆ ಹಾಕಿದ್ದಾರೆ.
ಪಾತ್ರೆ, ಬಟ್ಟೆಗಳನ್ನೆಲ್ಲ ಹೊರಗೆ ಎಸೆದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆ ಜಪ್ತಿ ಮಾಡಲಾಗಿದೆ.
ಗಣಪತಿ ಅವರು ಐದು ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ ಫೈನಾನ್ಸ್‌ನಿಂದ ₹5 ಲಕ್ಷ ಸಾಲ ಪಡೆದಿದ್ದರು. ನಿರಂತರ ಮೂರು ವರ್ಷ ಕಂತುಗಳನ್ನು ಸರಿಯಾಗಿಯೇ ತುಂಬಿದ್ದಾರೆ. ವೃದ್ಧ ತಾಯಿಗೆ ಅನಾರೋಗ್ಯ, ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಫೈನಾನ್ಸ್ ಕಂಪನಿಯು ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆ ಖಾಲಿ ಮಾಡಿಸಿದ್ದು, ಇದರಿಂದಾಗಿ ಬಾಣಂತಿ ಸೆರಿದಂತೆ ಕುಟುಂಬದವರು ಉಪವಾಸ ಕಳೆಯುವಂತಾಯಿತು. ಬಾಣಂತಿ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಆಗಿದ್ದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನು ಓದಿದ್ದೀರಾ? ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ಗೆ ಗುಜರಾತಿ ಲೇಖಕಿ ಹಿಮಾಂಶಿ ಇಂದುಲಾಲ್ ಶೆಲತ್ ಆಯ್ಕೆ
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿ ವಿಚಾರವಾಗಿ ಜನರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಸಾಲ ಮಾಡಿದವರು ಆತ್ಮಹತ್ಯೆಗೆ ಶರಣಾಗುವ ವಿದ್ಯಮಾನ ಹೆಚ್ಚಳವಾಗುತ್ತಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಶನಿವಾರ (ಜ. 24) ದಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ರಾಜ್ಯದಲ್ಲಿ ಫೈನಾನ್ಸ್ ಕಂಪನಿಗಳ ಹಾವಳಿಯಿಂದ ನಡೆಯುತ್ತಿರುವ ಹಲವು ಬೆಳವಣಿಗೆಗಳ ಮಧ್ಯೆಯೇ ಈ ರೀತಿಯ ಘಟನೆ ರಾಜ್ಯದ ಗಮನ ಸೆಳೆದಿದೆ.
