ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ದುರಸ್ತಿಗೆ ಸಾರ್ವಜನಿಕರಿಂದ ಸಾಕಷ್ಟು ಒತ್ತಡವಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಣಕುಂಬಿ ಬಳಿಯ ಚೋರ್ಲಾ ಮೂಲಕ ಬೆಳಗಾವಿ-ಗೋವಾ ರಸ್ತೆಯ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೋವಾ ಮಾರ್ಗದ ದುರಸ್ತಿ ಅಗತ್ಯಗಳನ್ನು ಪರಿಹರಿಸುವಂತೆ ಹಲವಾರು ಸಂಘಟನೆಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಕಣಕುಂಬಿ ಬಳಿ 43.3 ಕಿ.ಮೀ ಉದ್ದದ ಬೆಳಗಾವಿ-ಚೋರ್ಲಾ-ಗೋವಾ ರಾಜ್ಯ ಹೆದ್ದಾರಿ-748ಎ ದುರಸ್ತಿ ಕಾಮಗಾರಿಗೆ ಇದೀಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ₹12 ಲಕ್ಷ ಮೌಲ್ಯದ ಮದ್ಯ ವಶ; ಆರೋಪಿ ಬಂಧನ
“ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ 58.9 ಕೋಟಿ ರೂ. ವೆಚ್ಚದಲ್ಲಿ ರಣಕುಂಡೆ ಗ್ರಾಮದಿಂದ ಚೋರ್ಲಾ ಗ್ರಾಮದವರೆಗಿನ ರಸ್ತೆಯಲ್ಲಿ ಒಳಚರಂಡಿ, ಸೇತುವೆ ನಿರ್ಮಾಣ ಸೇರಿದಂತೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, 11 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದು ಕರ್ನಾಟಕ ಮತ್ತು ಗೋವಾವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿಯಾಗಿದೆ. ಪ್ರಯಾಣಿಕರಿಗೆ ಬೆಳಗಾವಿಯಿಂದ ಗೋವಾಕ್ಕೆ ಅನುಕೂಲಕರವಾದ ಸಣ್ಣ ಮಾರ್ಗವಾಗಿದೆ. ಅರಣ್ಯ ಇಲಾಖೆಯ ಸ್ಥಳದಿಂದಾಗಿ ರಸ್ತೆಯ ಅಗಲೀಕರಣ ಸಾಧ್ಯವಿಲ್ಲ. ಆದರೆ ರಸ್ತೆಬದಿಯಲ್ಲಿ ಚರಂಡಿ ನಿರ್ಮಿಸಲಾಗುವುದು ಇದರಿಂದ ಹಾನಿಯಾಗುವುದಿಲ್ಲ” ಎಂದು ಹೇಳಿದರು.
