ಪ್ರವಾಹದಿಂದ ಉಂಟಾಗಿರುವ ಬೆಳೆಹಾನಿಗೆ ಶೀಘ್ರವೇ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಗೋಕಾಕ್ ಮತ್ತು ಮೂಡಲಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಗೋಕಾಕ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಬಳಿಕ “ಈ ವರ್ಷದ ಪ್ರವಾಹದಿಂದ ಬೆಳೆ ನಾಶವಾಗಿದೆ. ಇದರಿಂದ ರೈತರ ಸ್ಥಿತಿ ಅಂತಂತ್ರವಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಹಾಗಾಗಿ ಆದಷ್ಟು ಬೇಗ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

“ಜಿಲ್ಲೆಯಲ್ಲಿ ಪ್ರವಾಹದಿಂದ ಸೋಯಾಬಿನ್, ಜೋಳ, ಕಬ್ಬು, ಹತ್ತಿ ಮುಂತಾದ ಬೆಳೆಗಳು ನಾಶವಾಗಿದ್ದು, ರೈತರಿಗೆ ಸಾಕಷ್ಟು ನಷ್ಟವಾಗಿದೆ. ಆದಷ್ಟು ಬೇಗನೆ ಬೆಳೆಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ರೈತ ಮುಖಂಡ ಶಿವಪುತ್ರಪ್ಪ ಜಕಬಾಳ್ ಮಾತನಾಡಿ, “ರಾಜ್ಯದ ಅನೇಕ ಭಾಗಗಳಲ್ಲಿ ಪ್ರವಾಹದಿಂದ ಸಾಕಷ್ಟು ಬೆಳೆಗಳು ನಾಶವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆದ ಕಬ್ಬು, ಜೋಳ, ಹತ್ತಿ, ಸೋಯಾಬೀನ್ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಈವರೆಗೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಆದಷ್ಟು ಬೇಗನೆ ಅಧಿಕಾರಿಗಳು ಬೆಳೆಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರೈತ ಹೋರಾಟಗಾರರ ಜೊತೆ ಮಾಡಿಕೊಂಡ ಒಡಂಬಡಿಕೆಯನ್ನು ಅನುಷ್ಠಾನಕ್ಕೆ ತರಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಹದಗೆಟ್ಟಿರುವ ರಸ್ತೆಯ ದುರಸ್ತಿಗೆ ಸ್ಥಳೀಯರ ಆಗ್ರಹ.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವನಗೌಡ ಪಾಟಿಲ್, ಜಿಲ್ಲಾ ಉಪಾಧ್ಯಕ್ಷ ಬಾಳಪ್ಪ ಪಾಟಿಲ್, ಗೋಕಾಕ ತಾಲೂಕು ಅಧ್ಯಕ್ಷರಾದ ಪರಸಪ್ಪ ಸಣ್ಣಪಾಣಿ, ಯಮನಪ್ಪ ಚೂಂಚನೂರ, ಶಂಕರ ಹುಗ್ಗಿ ಮತ್ತು ರೈತ ಸಂಘಟನೆಯ ಸದಸ್ಯರು ಇದ್ದರು.