ಬೆಳಗಾವಿ ಜಿಲ್ಲೆಯ ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ವತಿಯಿಂದ ಕಿತ್ತೂರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
2021ರ ಜು.26 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರು ಕಾರ್ಖಾನೆಯಿಂದ ಸಕ್ಕರೆ ಸಾಗಿಸುತ್ತಿದ್ದ 4 ಲಾರಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಇನ್ವೈಸ್ನಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚು ಸಕ್ಕರೆ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು ಎಂದು ವರದಿ ಸಲ್ಲಿಸಿದ್ದರು.
ಇನ್ನೂ ಹೆಚ್ಚುವರಿ ಸಕ್ಕರೆ ದಾಸ್ತಾನು ಕಾರ್ಖಾನೆ ಗೋದಾಮಿನಲ್ಲಿದೆ ಎಂದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲು ಮಾಡಿಲ್ಲ. ಇದನ್ನು ಖಂಡಿಸಿ ಹಾಗೂ ಕಾರ್ಖಾನೆಯಲ್ಲಿ ನಡೆದ ಅನೇಕ ಅವ್ಯವಹಾರಗಳ ಕುರಿತು ತನಿಖೆ ಮಾಡುವಂತೆ ಒತ್ತಾಯಿಸಿ ಅ. 18 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಸಂಘ (ಒಕ್ಕೂಟ)ದ ಪದಾಧಿಕಾರಿಗಳು ಕಿತ್ತೂರು ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘಟನೆಯ ಮುಖಂಡರಾದ ಬೀರಪ್ಪ ದೇಶನೂರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕ ರೈತ ಸಂಘಟನೆಗಳು, ಷೇರುದಾರರು ಹಾಗೂ ಈ ಭಾಗದ ರೈತರು ಹೋರಾಟ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಚನ್ನಗಿರಿ | ದೃಢೀಕರಣ ಪತ್ರ ನೀಡಲು ರೈತನಿಂದ ಲಂಚ: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಉಪತಹಶೀಲ್ದಾರ್
ಈ ಸಂದರ್ಭದಲ್ಲಿ ವೇಳೆ ರೈತ ಸಂಘಟನೆಯ ಬಸವರಾಜ ಮೋಕಾಶಿ, ರುದ್ರಪ್ಪ ಸಂಜೀವಕುಮಾರ ತಿಳಗರ, ಶಿವಾನಂದ ಜ್ಯೋತಿ, ಬಸನಗೌಡ ಪಾಟೀಲ, ಈರಣ್ಣ ಅಂಗಡಿ, ಮಹಾಂತೇಶ ಗೌರಿ ಉಪಸ್ಥಿತರಿದ್ದರು.
