ಮರಾಠಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಪಂಚಾಯತ್ ಅಧಿಕಾರಿಯೊಬ್ಬರನ್ನು ನಿಂದನೆ ಮಾಡಿದ ಆರೋಪದಲ್ಲಿ ಬೆಳಗಾವಿಯ ವ್ಯಕ್ತಿಯೊಬ್ಬರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿನಾಯೆ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಆರೋಪಿ ತಿಪ್ಪಣ್ಣ ಸುಭಾಷ್ ಡೋಕ್ರೆ ನಿಂದಿಸಿದ್ದಾನೆ ಎಂದು ಹೇಳಲಾಗಿದೆ.
ಆಸ್ತಿ ಸಂಬಂಧಿತ ವಿಷಯಕ್ಕೆ ಸಂಬಂಧಿಸಿದಂತೆ ಡೋಕ್ರೆ ಗ್ರಾಮ ಪಂಚಾಯತ್ ಕಚೇರಿಗೆ ಮಂಗಳವಾರ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮುಂಬೈನ ಭಾಷೆ ಮರಾಠಿ, ಇತರರೂ ಅರ್ಥಮಾಡಿಕೊಳ್ಳಬೇಕು: ಆರ್‌ಎಸ್‌ಎಸ್ ನಾಯಕ ಯೂಟರ್ನ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಪತ್ತಾರ್ ಜೊತೆ ಕನ್ನಡದ ಬದಲು ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾನೆ. ತಮ್ಮ ಆಸ್ತಿ ಕೆಲಸಕ್ಕೆ ಸಂಬಂಧಿಸಿದ ದಾಖಲೆಯನ್ನು ಮರಾಠಿಯಲ್ಲಿ ನೀಡುವಂತೆ ಒತ್ತಾಯಿಸಿ ವಾಗ್ವಾದ ನಡೆಸಿದ್ದಾನೆ ಎಂದು ವರದಿಯಾಗಿದೆ.
ಸದ್ಯ ಅಧಿಕಾರಿಯನ್ನು ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ್, “ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆರೋಪಿಯನ್ನು ಬಂಧಿಸಲಾಗಿದೆ, ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್ ವಿಜಯ್‌ರ ಟಿವಿಕೆ ಸೇರ್ಪಡೆ
“ಅಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ದುರ್ವರ್ತನೆ ತೋರಿದ ಘಟನೆಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯಕ್ಕೆ ಅಡ್ಡಿ ಬಂದ ಆರೋಪದಲ್ಲಿ ಡೋಕ್ರೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದರು.
ಸದ್ಯ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟ ನಡೆಯುತ್ತಿದೆ. ಈ ನಡುವೆ ಸ್ಥಳೀಯವಾಗಿ ರಾಜ್ಯ ಗಡಿ ಜಿಲ್ಲೆಗಳಲ್ಲಿ ಭಾಷೆಯ ವಿಚಾರದಲ್ಲಿ ವಾಗ್ವಾದಗಳು ನಡೆಯುತ್ತಲೇ ಇದೆ. ಬೆಳಗಾವಿ ಮಹಾರಾಷ್ಟ್ರದ ಗಡಿ ಜಿಲ್ಲೆಯಾಗಿದ್ದು, ಇಲ್ಲಿ ಮರಾಠಿ ಮತ್ತು ಕನ್ನಡ ಮಾತನಾಡುವವರಿದ್ದಾರೆ. ಈ ಜಿಲ್ಲೆಯಲ್ಲಿ ಆಗಾಗ ಕನ್ನಡ ಪರ ಸಂಘಟನೆಗಳು ಮತ್ತು ಮರಾಠಿ ಸಂಘಟನೆಗಳ ನಡುವೆ ಸಂಘರ್ಷ ನಡೆಯುತ್ತಿರುತ್ತದೆ.
