ಕಂಬಳಿ ನೇಕಾರಿಕೆ ಗ್ರಾಮಿಣ ಭಾಗದ ಕುರಿಗಾಹಿ ಸಮುದಾಯದ ಜೀವನಾಧಾರ. ʼಅಂಬಲಿಗಿಂತ ಉಂಬಳಿ ಇಲ್ಲ ಕಂಬಳಿಗಿಂತ ಹಾಸಿಗೆ ಇಲ್ಲʼ ಎಂಬ ಹಿರಿಯರ ನಾಣ್ಣುಡಿ ಎಷ್ಟು ಸತ್ಯವೆಂಬುದು ಕಂಬಳಿ ಉಪಯೋಗಿಸುವವರಿಗೆ ಮಾತ್ರ ತಿಳಿಯುತ್ತದೆ. ಕಂಬಳಿ ತಯಾರಿಸುವ ಕಲೆ ಅದ್ಭುತ ಮತ್ತು ಕಷ್ಟದಾಯಕ ಹಾಗೂ ಅದೊಂದು ಕರಕುಶಲ ಕಲೆ.
ಕಂಬಳಿ ತಯಾರಿಸುವ ಕಾಯಕ ಕುರುಬ ಸಮುದಾಯಕ್ಕೆ ಅವರ ಹಿರಿಯರಿಂದ ಬಂದ ಉಡುಗೊರೆ. ಮೊದಲು ಕುರಿ ಕಾಯುವ ಕುರಿಗಾಹಿಗಳ ಹತ್ತಿರ ಹೋಗಿ ಜವಾರಿ ಕುರಿಗಳ ತುಪ್ಪಳವನ್ನು ಕತ್ತರಿಸಿ ಸಂಗ್ರಹಿಸಿ ಅದರ ಹಂಜಿಯನ್ನು ಮಾಡಲಾಗುತ್ತದೆ. ನಂತರ ಅದನ್ನು ಗಾಂಧಿ ಚರಕದಲ್ಲಿ ನೂಲುವುದು ಒಂದು ಕಾಯಕ. ನೂಲು ಯಾವ ಮಟ್ಟವಿರುತ್ತದೆಯೋ ಕಂಬಳಿ ಆ ಮಟ್ಟದ್ದಾಗುತ್ತದೆ.
ಹಿಂಜಿ ಹಂಜಿ ಮಾಡಿದ ತುಪ್ಪಳವನ್ನು ಕಂಬಳಿಗಳ ವಿನ್ಯಾಸದ ಯೋಜನೆಗೆ ಅನುಗುಣವಾಗಿ ನೂಲುತ್ತಾರೆ. ನೂಲುವ ಕಾಯಕ ಮಾಡುವುದು ಮಹಿಳೆಯರು. ಅವರು ಹಂಜಿಯಿಂದ ನೂಲು ತಯಾರಿಸಿ ಕಂಬಳಿ ತಯಾರಿಸಲು ಮಗ್ಗಗಳಿಗೆ ಕೊಡುತ್ತಾರೆ. ನಂತರ ಕಂಬಳಿ ನೇಕಾರರು ಮಗ್ಗದಲ್ಲಿ ಮೊದಲ ಹಂತದಲ್ಲಿ ಕಂಬಳಿ ನೂಲುಗಳನ್ನು ಜೋಡಿಸಿ ನಂತರ ನೇಯ್ದು ಅದಕ್ಕೆ ಗಂಜಿಯನ್ನು ಸವರಿ ಬಿಸಲಿನಲ್ಲಿ ಒಣಗಿಸಿದಾಗ ಒಂದು ಕಂಬಳಿ ಸಿದ್ಧವಾಗುತ್ತದೆ. ಒಟ್ಟಿನಲ್ಲಿ ಕಂಬಳಿ ತಯಾರಿಕೆಗೆ ಕುರುಬ ಸಮುದಾಯವೇ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ.
ಕಂಬಳಿಯಲ್ಲಿ ಬೇರೆ ಬೇರೆ ವಿಧಗಳಿವೆ. ಹುರಿಗಂಬಳಿ, ಉಜ್ಜುಗಂಬಳಿ, ಶಾಲು ಸಕಲಾತಿ ಸಣ್ಣ ಕಂಬಳಿ. ಗದ್ಧುಗೆ ಧಾವಳಿ, ಕರಿಯ ಕಂತೆ ಈ ರೀತಿಯಾಗಿ ಕಂಬಳಿ ತಯಾರಿಕೆಯಲ್ಲಿ ಹಲವು ವಿಧಗಳಿವೆ. ಕಂಬಳಿ ಕುರುಬ ಸಮುದಾಯಕ್ಕೆ ಕೇವಲ ಒಂದು ಹಾಸಿಗೆ ಅಥವಾ ಮಾರಾಟದ ವಸ್ತುವಲ್ಲ. ಅದು ಅವರ ದೈವದ ಪ್ರತೀಕ ಮತ್ತು ಅವರುಗಳಿಗೆ ಕಂಬಳಿಯ ಮೇಲೆ ಅಪಾರ ಗೌರವ. ಕಂಬಳಿಯು ಚಳಿಯನ್ನು ತಡೆಯುತ್ತದೆ. ಮಳೆಗಾಲದಲ್ಲಿ ಹೆಚ್ಚು ಉಪಯೋಗವಾಗುತ್ತದೆ. ಇದೇ ಕಾರಣಕ್ಕೆ ಕುರಿಗಾಹಿಗಳು ಬೆಟ್ಟ ಗುಡ್ಡ ಕಾಡುಗಳಲ್ಲಿ ಅಲೆದಾಡಿ ಕುರಿಗಳನ್ನು ಮೇಯಿಸುವುದರಿಂದ ಚಳಿ ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಹಾಗೂ ಅನೇಕ ಶುಭ ಸಮಾರಂಭಗಳಲ್ಲಿ ತಂಪಾದ ಪ್ರದೇಶಗಳಲ್ಲಿ ವಾಸಿಸುವಾಗ ಕಂಬಳಿಯನ್ನು ಬಳಸುತ್ತಾರೆ.
ಇಷ್ಟೆಲ್ಲ ವೈವಿಧ್ಯತೆಯಿಂದ ಕೂಡಿರುವ ಕಂಬಳಿ ನೇಯುವ ಕಂಬಳಿ ನೇಕಾರರ ಬದುಕು ಅತಂತ್ರವಾಗಿರುವುದು ಮಾತ್ರ ವಿಪರ್ಯಾಸ. ಕಂಬಳಿ ನೇಕಾರಿಕೆಯನ್ನು ಮೆಚ್ಚಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಕಂಬಳಿ ನೇಕಾರರ ಬದುಕು ಮತ್ತು ಅವರ ಆರ್ಥಿಕ ಪರಿಸ್ಥಿತಿ ದುಃಸ್ಥಿತಿಯನ್ನು ತಲುಪಿದೆ.
ಕಂಬಳಿ ನೇಕಾರಿಕೆಗೆ ಹೆಸರುವಾಸಿಯಾಗಿರುವ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮಕ್ಕೆ ಈ ದಿನ.ಕಾಮ್ ಭೇಟಿ ನೀಡಿ ಅಲ್ಲಿನ ಕೆಲವು ಕಂಬಳಿ ನೇಕಾರರನ್ನು ಮಾತನಾಡಿಸಿದಾಗ ಈ ಕುರಿತು ಕೆಲವರು ಪ್ರತಕ್ರಿಯೆ ನೀಡಿದ್ದಾರೆ.
ಬೆನಕಟ್ಟಿ ಗ್ರಾಮದ ಕಂಬಳಿ ನೇಕಾರ ರುದ್ರಪ್ಪ ಸಾವಳಗಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುಮಾರು 25 ವರ್ಷಗಳಿಂದ ಅಂದ್ರ ಸಣ್ಣವರಿದ್ದಾಗಿನಿಂದ ಕಂಬಳಿ ನೇಯುವ ಕೆಲಸ ಶುರು ಮಾಡೀವಿ. ಒಂದು ಕಂಬಳಿ ನೇಯಬೇಕು ಅಂದ್ರ ನಾಲ್ಕು ದಿನ ಬೇಕಾಗ್ತದ. ಆದ್ರ ನಮಗ ದಿನಕ್ಕೆ ಕೆವಲ 150 ರೂಪಾಯಿ ಮಾತ್ರ ಪಗಾರ ಸಿಗ್ತೈತಿ. ಸಂಸಾರವನ್ನು ಸಲಹುವುದು ಬಹಳ ಕಷ್ಟ ಆಗ್ತದ. ನಮ್ಮ ಹಿರಿಯರ ಕಾಲದಿಂದ ಈ ಉದ್ಯೋಗ ಮಾಡ್ಕೊಂತ ಬಂದೀವಿ. ಬಿಡಬಾರ್ದು ಅಂತ ಅನಿವಾರ್ಯವಾಗಿ ಈ ಕೆಲಸ ಮಾಡಾಕತ್ತೀವಿ. ಸಿದ್ದರಾಮಯ್ಯನವರು ಮೊದಲು ಮುಖ್ಯಮಂತ್ರಿ ಆದಾಗ ಸರ್ಕಾರದಿಂದ ಅಲ್ಪ ಸ್ವಲ್ಪ ಸಹಾಯಧನ ಸಿಗ್ತಿತ್ತು. ಆಮ್ಯಾಲ ಅದನ್ನು ಬಂದ್ ಮಾಡಿದ್ರು. ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ಯಾರ, ಸರ್ಕಾರದಿಂದ ಏನಾದ್ರೂ ಸಹಾಯ ಮಾಡಿದ್ರ ಬದುಕ್ತೀವಿ” ಎಂದು ಬೇಸರ ವ್ಯಕ್ತಪಡಿಸಿದರು.
ಕಂಬಳಿ ತಯಾರಿಕೆಗೆ ಬೇಕಾಗುವ ನೂಲನ್ನು ತಯಾರಿಸುವ ಕಾಯಕ ಮಾಡುವ ತಾಯಂದಿರನ್ನು ಹೇಗಿದೆ ಕಂಬಳಿ ನೇಕಾರಿಕೆ ಎಂದು ಈ ದಿನ.ಕಾಮ್ ವಿಚಾರಿಸಿದರೆ, “ಏನ್ ಮಾಡುದ್ರಿ ನಾವು ಹಿಂದಿನ ಕಾಲದಿಂದ ಈ ಉದ್ಯೊಗ ಮಾಡ್ಕೊಂತ ಬಂದೀವಿ. ಇದ್ರಾಗೇನೂ ಗಳಿಕೆ ಇಲ್ರಿ. ಹೊಟ್ಟೆ ತುಂಬಿಸಿಕೊಳ್ಳುವುದೂ ಕಷ್ಟ ಐತಿ. ಊರಿಂದ ಊರಿಗೆ ಅಲೆದಾಟ ಮಾಡಿ ಕುರಿ ಉಣ್ಣೆ ತರಬೇಕಂದ್ರ ಬಹಳ ತೊಂದರೆ ಆಗ್ತದ. ಸರ್ಕಾರಿ ವಾಹನದಾಗ ಕುರಿ ಉಣ್ಣೆ ಹಾಕಬ್ಯಾಡ್ರಿ ಅಂತ ನಡು ರಸ್ತೆಯೊಳಗ ನಮ್ಮ ಕುರಿ ಉಣ್ಣೆ ಚೀಲಗಳ ಸಹಿತ ನಮ್ಮನ್ನು ಬಸ್‌ನಿಂದ ಕೆಳಗೆ ಇಳಿಸ್ತಾರ. ಇದರಿಂದ ಬೇರೆ ಊರಿನಿಂದ ಕುರಿ ಉಣ್ಣೆ ತರಾಕ ಹರಸಾಹಸ ಮಾಡ್ತೀವಿ. ಇಷ್ಟೆಲ್ಲಾ ಮಾಡಿ ಕುರಿ ಉಣ್ಣೆಯನ್ನು ಹಿಂಜಿ ಹಂಜಿ ಮಾಡಿ ಗಾಂಧಿ ಚರಕದಲ್ಲಿ ನೂಲು ಮಾಡಿ ಕೊಡ್ತೀವಿ. ಪಗಾರ ಪುರೋಟ ಬಿಳಾಂಗಿಲ್ಲ” ಎಂದು ಶಿವಪುತ್ರವ್ವ ತಮ್ಮ ಅಳಲು ತೋಡಿಕೊಂಡರು.
“ಬೆನಕಟ್ಟಿ ಗ್ರಾಮದಲ್ಲಿ ಐದಾರು ವರ್ಷಗಳ ಹಿಂದೆ ನೂರಾರು ಕಂಬಳಿ ನೇಯುವ ಮಗ್ಗಗಳಿದ್ದವು. ನಂತರದ ದಿನಗಳಲ್ಲಿ ಕಂಬಳಿಗೆ ಸರಿಯಾದ ಬೆಲೆ ಸಿಗದಿರುವುದರಿಂದ ಕಂಬಳಿ ನೇಯುವ ಮಗ್ಗಗಳು ಅನಾಥವಾಗಿ ಬೀಳುವಂತಾಯಿತು. ಇಂದು ಈ ಊರಿನಲ್ಲಿ 25 ಕಂಬಳಿ ನೇಕಾರಿಕೆಯ ಮಗ್ಗಗಳು ಮಾತ್ರ ಕಾಣಸಿಗುತ್ತವೆ. ಸರ್ಕಾರವು ಕುರಿ ಉಣ್ಣೆ ಉತ್ಪಾದಕರು ಮತ್ತು ಕಂಬಳಿ ನೇಕಾರರಿಗೆ ಸಹಾಯವಾಗಲಿ ಅಂತ ಕುರಿ ಉಣ್ಣೆ ಉತ್ಪಾದನೆ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಅವುಗಳಿಗೆ ಅನುದಾನ ನೀಡುತ್ತಾ ಬಂದಿತ್ತು. ಇತ್ತಿಚೀನ ವರ್ಷಗಳಲ್ಲಿ ಈ ಸಹಕಾರಿ ಸಂಘಗಳಿಗೆ ಸಿಗಬೇಕಾದಷ್ಟು ಅನುದಾನ ಸಿಗುತ್ತಿಲ್ಲ ಮತ್ತು ಸರ್ಕಾರ ನೀಡುವ ನೆರವು ಬಡ ಕಂಬಳಿ ನೇಕಾರರಿಗೆ ಮುಟ್ಟುತ್ತಿಲ್ಲ” ಎಂದು ಆರೋಪಿಸಿದರು.
“ಸರ್ಕಾರದಿಂದ ಸಾಲ ಸೌಲಭ್ಯವೂ ಇಲ್ಲ. ತಯಾರಿಸಿದ ಕಂಬಳಿಗಳಿಗೆ ಸರಿಯಾದ ಮಾರುಕಟ್ಟೆ ಸಿಗದಿರುವುದು ಮತ್ತು ದುಡಿಮೆಗೆ ತಕ್ಕ ಬೆಲೆ ಸಿಗದಿರುವುದರಿಂದ ಕಂಬಳಿ ನೇಕಾರರು ದುಃಸ್ಥಿತಿ ತಲಪುವಂತಾಗಿದೆ. ಅಲ್ಲದೇ, ಕಂಬಳಿ ನೇಕಾರರ ಸಂಖ್ಯೆಯೂ ಕಡಿಮೆ ಆಗಿದೆ. ಗ್ರಾಮೀಣ ಭಾಗದ ಗೃಹ ಕೈಗಾರಿಕೆಗಳು ತಲೆಯೆತ್ತಿದರೆ, ಗ್ರಾಮೀಣ ಭಾಗದ ಜನರ ಜೀವನ ಸುಧಾರಿಸಲು ಸಾಧ್ಯವಾಗುತ್ತದೆ” ಎಂದರು.
ಇದನ್ನೂ ಓದಿದ್ದೀರಾ? ಕಾವೇರಿ ಕೂಗು ನಮಗ ಕೇಳ್ತದ – ಕೃಷ್ಣೆ, ಮಹದಾಯಿ, ಮಲಪ್ರಭೆಯ ಕೂಗೂ ನಿಮ್ಮಗ್ಯಾಕೆ ಕೇಳಲ್ಲ
“ಕುರಿ ಕಾಯುವ ಕುರಿಗಾಹಿಗಳು ಮಳೆ, ಚಳಿ, ಬಿಸಿಲು ಎನ್ನದೆ ಬೆಟ್ಟ-ಗುಡ್ಡ, ಕಾಡುಗಳಲ್ಲಿ ಅಲೆದಾಡಿ ಆಧುನಿಕತೆಯ ಜೀವನದಿಂದ ದೂರ ಉಳಿದು ಕುರಿ ಮೇಯಿಸಿ ಕುರಿ ಉಣ್ಣೆಯನ್ನು ಕಂಬಳಿ ನೇಕಾರರಿಗೆಗೆ ನೀಡುತ್ತಾರೆ. ಆದ್ಧರಿಂದ ಸರ್ಕಾರ ಕುರಿಗಾಹಿಗಳಿಗೂ ಹೊಸ ಯೋಜನೆ ಮೂಲಕ ಅವರ ಜೀವನವಕ್ಕೆ ಆಧಾರವಾಗಬೇಕಿದೆ. ಕುರಿ ಸಾಕಾಣಿಕೆ ಉಳಿದಾಗ ಮಾತ್ರ ಕಂಬಳಿ ನೇಕಾರಿಕೆಯು ಉಳಿಯುತ್ತದೆ. ಆದಷ್ಟು ಬೇಗ ಸರ್ಕಾರವು ಕುರಿಗಾಹಿ ಸಮುದಾಯ ಹಾಗೂ ಕಂಬಳಿ ನೇಕಾರರ ನೆರವಿಗೆ ಬರಬೇಕು” ಎಂದು ಅವರು ಒತ್ತಾಯಿಸಿದರು.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು
Super