ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶ ಸಿಂಪಡಣೆ ಮಾಡುವುದು ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಒಳ್ಳೆಯ ಪದ್ಧತಿಯಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ವತಿಯಿಂದ ಹತ್ತರಗಿ ಬಳಿಯ ಕೃಷಿ ಜಮೀನಿನಲ್ಲಿ ಆಯೋಜಿಸಲಾದ ಸೋಯಾ ಮತ್ತು ಅವರೆ ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಡ್ರೋನ್ ಮೂಲಕ ಪೋಷಕಾಂಶ ಸಿಂಪಡಣೆ ಮಾಡುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಮತ್ತು ವೇಗವಾಗಿ ಕೃಷಿ ಚಟುವಟಿಕೆ ನಿರ್ವಹಿಸಲು ಸಾಧ್ಯವಾಗುತ್ತದೆ. ರೈತರು ಹೊಸ ತಂತ್ರಜ್ಞಾನದ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಬೆಳವಣಿಗೆಯಾಗಬೇಕು” ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, “37 ಡ್ರೋನ್‌ಗಳನ್ನು ಸೋಯಾ, ಅವರೆ ಬೆಳೆಗಳಿಗೆ ಪೋಷಕಾಂಶಗಳ ಸಿಂಪಡಣೆಗೆ ಬಳಕೆ ಮಾಡಲಾಗುತ್ತಿದೆ. ರೈತರು ಬೆಳೆದ ವಿವಿಧ ಬೆಳೆಗಳಿಗೆ ಪೋಷಕಾಂಶ ಮತ್ತು ರಸಗೊಬ್ಬರಗಳನ್ನು ಸಿಂಪಡಣೆ ಮಾಡಲು ಈ ವಿಧಾನ ಅನುಕೂಲವಾಗಿದೆ” ಎಂದು ಹೇಳಿದರು.
“ಪ್ರತಿ ಎಕರೆ ಸಿಂಪಡಣೆಗೆ ಕೇವಲ ₹400 ಖರ್ಚಾಗುತ್ತದೆ. ಡ್ರೋನ್ ಮೂಲಕ ವಿವಿಧ ಬೆಳೆಗಳಿಗೆ ಕೀಟನಾಶಕ, ರಸಗೊಬ್ಬರ ಸಿಂಪಡಣೆ ಮಾಡಬಹುದು. ರೈತರಿಗೆ ತಾಂತ್ರಿಕತೆಯ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ; ರಾಜ್ಯಪಾಲರ ಅಧಿಕಾರ ದುರುಪಯೋಗಕ್ಕೆ ಸಿಪಿಐಎಂ ಖಂಡನೆ
“ಜಿಲ್ಲೆಯ ರೈತ ಸಮುದಾಯವು ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಡ್ರೋನ್ ಬಳಕೆ ಬಗ್ಗೆ ಮಾಹಿತಿ ಪಡೆಯಬೇಕು. ಈಗಾಗಲೇ ಕಿತ್ತೂರು ಬೈಲಹೊಂಗಲ ಬಾಗೇವಾಡಿಯಲ್ಲಿ ಕಬ್ಬುಬೆಳೆಗೆ ಡ್ರೋನ್ ಬಳಕೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕರು, ಹುಕ್ಕೇರಿ ತಹಶೀಲ್ದಾರ್ ಮಂಜುಳಾ ನಾಯಕ, ರೋಟರಿ ಕ್ಲಬ್ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.