ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಡಿ.20ರಂದು ನಡೆದ ತುಂಬು ಗರ್ಭಿಣಿ ಸುವರ್ಣ ಮಠಪತಿ ಅವರ ಭೀಕರ ಕೊಲೆ ಪ್ರಕರಣದಲ್ಲಿ ಗಂಡನ ಅಣ್ಣನೇ ಕೊಲೆ ಆರೋಪಿ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಾರದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 9 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಗರ್ಭಿಣಿ ಸುವರ್ಣ ಮಠಪತಯವರನ್ನು ಹಾರೊಗೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ 33 ವರ್ಷದ ಗರ್ಭಿಣಿ ಸುವರ್ಣ ಮಾಂತಯ್ಯ ಮಠಪತಿ ಸಾವನ್ನಪ್ಪಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಕೃತ್ಯ ಎಸಗಿದ್ದರಿಂದ ಈ ಘಟನೆಯಿಂದಾಗಿ ಇಡೀ ಗ್ರಾಮವೇ ಬೆಚ್ಚಿ ಬಿದ್ದಿತ್ತು.
ಈ ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆರೋಪಿಯ ಜಾಡು ಹಿಡಿದು ಹೋದಾಗ ಕೊಲೆ ಮಾಡಿದ್ದು ಮೃತ ಸುವರ್ಣಳ ಸ್ವಂತ ಅಕ್ಕನ ಗಂಡ ಅಂದ್ರೆ ಭಾವನೇ ಇಂತಹ ಪೈಶಾಚಿಕ ಕೃತ್ಯವೆಸಗಿರೋದು ಪೋಲಿಸರಿಂದ ತಿಳಿದು ಬಂದಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿವಾಸಿ ಅಪ್ಪಯ್ಯ ರಾಚಯ ಮಠಪತಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೆಲಸವಿಲ್ಲದೆ, ಕುಡಿತದ ದಾಸನಾದ ಕೊಲೆ ಆರೋಪಿ ಅಪ್ಪಯ್ಯ 7.5 ಲಕ್ಷ ಸಾಲ ಮಾಡಿದ್ದ. ಕೊಲೆಯಾದ ಸುವರ್ಣ ಬಳಿಯೂ ಸುಮಾರು 50,000 ಹಣ ಪಡೆದಿದ್ದ. ಮತ್ತೆ ಹಣ ನೀಡುವಂತೆ ಕೇಳುತ್ತಿದ್ದ.
ಕೊಲೆ ನಡೆಯೋ ಎರಡು ದಿನಗಳ ಹಿಂದೆ ಕೊಲೆ ಆರೋಪಿ ಅಪ್ಪಯ್ಯ ಜೊತೆ ಸುವರ್ಣ, ನನ್ನ ಡೆಲಿವರಿ ಸಮಯ ಹತ್ರ ಬಂದಿದೆ. ನನಗೆ ನನ್ನ ಹಣ ನೀಡು ಎಂದು ಫೋನ್‌ನಲ್ಲಿ ಗದರಿದ್ದಾಳೆ. ಸಿಟ್ಟಿಗೆದ್ದ ಅಪ್ಪಯ್ಯ ಆಕೆಯನ್ನೇ ಮುಗಿಸಿ ಬಿಡುವ ಸಂಚು ಹಾಕಿ, ಡಿ. 20ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರ ತೋಟದ ಮನೆಗೆ ಬಂದು ಗರ್ಭಿಣಿ ಸುವರ್ಣ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೈಮೇಲಿದ್ದ ಓಲೆ ಹಾಗೂ ಸಣ್ಣಪುಟ್ಟ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದನು. ಅಥಣಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಸುವರ್ಣ 18 ವರ್ಷಗಳ ಹಿಂದೆ, ಮಹಾಂತಯ್ಯಾ ದುಂಡಯ್ಯಾ ಮಠಪತಿ ಅವರನ್ನು ವಿವಾಹವಾಗಿದ್ದರು. ಇವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಅವರನ್ನು 15 ವರ್ಷದ ಸಾಕ್ಷಿ, 12 ವರ್ಷದ ಸಾಂಯವ್ವಾ, 9 ವರ್ಷದ ಶ್ರಾವಣಿ ಹಾಗೂ 6 ವರ್ಷದ ಸುರಕ್ಷಾ ಎಂದು ಗುರುತಿಸಲಾಗಿದೆ. ಇನ್ನೊಂದು ವಾರದಲ್ಲಿ ಈಕೆ ಐದನೇ ಮಗುವಿಗೆ ಜನ್ಮ ನೀಡಬೇಕಿತ್ತು.
ಕೇವಲ ಹಣಕ್ಕಾಗಿ ತುಂಬು ಗರ್ಭಿಣಿ ಅಂತಾನೂ ಲೆಕ್ಕಿಸದೆ ನೀಚ ಕೃತ್ಯವೆಸಗಿದ ಪಾಪಿಯನ್ನು ಪೊಲೀಸರು, ಜೈಲಿಗಟ್ಟಿದ್ದು ಇತ್ತ ತಾಯಿ ಹಾಗೂ ಮಗುವನ್ನು ಕಳೆದುಕೊಂಡ ಕುಟುಂಬದ ರೋದನ ಹೇಳತೀರದಾಗಿದೆ.
