ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ) ಯೋಜನೆ ಅಡಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮೀಣ ಕೂಲಿಕಾರರ ಸಂಘಟನೆಯ ಮುಖಂಡರು ಮತ್ತು ಸದಸ್ಯರು ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಬೆಳಗಾವಿ ಜಿಲ್ಲೆಯಲ್ಲಿ ಮನರೇಗಾ ಯೋಜನೆಯಿಂದ ಅನೇಕ ಕೆಲಸಗಳಾಗಿದ್ಧು, ರಾಜ್ಯದಲ್ಲಿಯೇ ಉತ್ತಮ ಸಾಧನೆಯನ್ನು ಮಾಡಿದೆ. ಆದರೂ ಜಿಲ್ಲೆಯ ಹುಕ್ಕೆರಿ, ಸವದತ್ತಿ, ಗೋಕಾಕ, ಬೈಲಹೊಂಗಲ, ಕಿತ್ತೂರು, ಬೆಳಗಾವಿ ತಾಲೂಕುಗಳಲ್ಲಿ ಮನರೇಗಾ ಕೆಲಸದಲ್ಲಿ ಬಹುತೇಕ ಸಮಸ್ಯೆಗಳಿದ್ಧು, ಸರಿಯಾದ ಸಮಯಕ್ಕೆ ಕೂಲಿ ನೀಡುತ್ತಿಲ್ಲ, ವೇತನವನ್ನು ಕಡಿತ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಗ್ರಾಮ ಪಂತಾಯತಿ ಅಧಿಕಾರಿಗಳು ಮನರೇಗಾ ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿಲ್ಲ. ಕಾಯಕ ಬಂಧುಗಳ ವೇತನವನ್ನು ಸರಿಯಾಗಿ ಕೊಡುತ್ತಿಲ್ಲ. ಇದರಿಂದ ಮನರೇಗಾ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳು ಬದುಕು ಸಾಗಿಸುವದು ಕಷ್ಟವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಸಭೆ; ಅಗತ್ಯ ಕ್ರಮಕ್ಕೆ ಸೂಚನೆ
“ಗ್ರಾಮ ಪಂಚಾಯತ್ ಅಧಿಕಾರಿಗಳು ಮನರೇಗಾ ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಕೂಸ ಮುಖಾಂತರ ಜಿಲ್ಲೆಯಲ್ಲಿ ಮನರೇಗಾ ಯೋಜನೆಯಡಿ ಬಡ ಕಾರ್ಮಿಕರನ್ನು ಸಂಘಟಿಸಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ಧರೂ ಸಮಸ್ಯೆಗಳು ತಪ್ಪುತ್ತಿಲ್ಲ. ಆದ್ಧರಿಂದ ಮನರೇಗಾ ಯೋಜನೆಯಡಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕು” ಎಂದು ಒತ್ತಾಯಿಸಿದರು.
ಗ್ರಾಕೂಸ ಸಂಘಟನೆಯ ಮುಖಂಡರುಗಳಾದ ವಿಶ್ವೇಶರಯ್ಯ ಹಿರೇಮಠ, ಮಹಾದೇವಿ ಒ ಜಿ, ಗೌರಿ ಬೆಣ್ಣಿ, ಗೂಳಪ್ಪ ಮುಗದ ಇದ್ದರು.