ನನ್ನ ಮಗನ ಆತ್ಮಹತ್ಯೆ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ಹಾಗಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ ಅವರ ತಾಯಿ ಪಾರ್ವತಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಮಗ ಸಂತೋಷನು ಈಶ್ವರಪ್ಪ ಅವರಿಗೆ ಕಮಿಷನ್ ಕೊಟ್ಟಿದ್ದೇವೆ ಎಂದಿದ್ದ. ಆದರೆ, ಈ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಕೊಡಲಾಗಿದೆ. ನನ್ನ ಮಗನಿಗೆ ನ್ಯಾಯ ಸಿಕ್ಕಿಲ್ಲ” ಎಂದು ಕಣ್ಣೀರು ಹಾಕಿದರು.
“ಬಿ ಎಸ್ ಯಡಿಯೂರಪ್ಪ ಅವರಿಗೆ ನನ್ನ ಮಗ ಅಪ್ಪಾಜಿ ಎಂದು ಕರೆಯುತ್ತಿದ್ದ. ಸೊಸೆಗೆ ನೌಕರಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದೂ ಈಡೇರಿಲ್ಲ. ಕಾಮಗಾರಿಗೆ ಕೈಗೊಂಡ ಹಣವನ್ನೂ ಕೊಡಲಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಮರ್ಪಕ ಬಸ್ ವ್ಯವಸ್ಥೆಗೆ ಡಿವಿಪಿ ಆಗ್ರಹ
“ಈ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಬಂದ ನಂತರ, ಈಶ್ವರಪ್ಪ ಅವರ ಮನೆಯಲ್ಲಿ ಕುಟುಂಬಸ್ಥರು ಸಿಹಿ ತಿಂದರು. ಅವರಿಗೆ ನಮ್ಮಂತಹ ಪರಿಸ್ಥಿತಿ ಬಂದಿದ್ದರೆ, ಸಿಹಿ ತಿನ್ನುತ್ತಿದ್ದರಾ?” ಎಂದು ಬೇಸರ ವ್ಯಕ್ತಪಡಿಸಿದರು.
“ಮಗ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈವರೆಗೂ ಬಿಜೆಪಿ ಸರ್ಕಾರದ ಒಬ್ಬ ಪ್ರತಿನಿಧಿಯೂ ನಮ್ಮ ಮನೆಗೆ ಭೇಟಿ ನೀಡಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರುತನಿಖೆ ನಡೆಸುತ್ತೇವೆ ಎಂದಿದ್ದಾರೆ. ಅವರು ಏನು ಮಾಡುತ್ತಾರೆಯೇ ನೋಡೋಣ” ಎಂದು ಹೇಳಿದರು.