ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನೇಕಾರ ಮಾಲೀಕರಷ್ಟೆ ಅಲ್ಲದೆ ನೇಕಾರ ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಸಹ ಚರ್ಚೆಯಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.
ನೇಕಾರ ಕೂಲಿ ಕಾರ್ಮಿಕರು ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಇದುವರೆಗೂ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 20 ಜನ ಕೂಲಿ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರುಗಳು ನೇಕಾರ ಕೂಲಿ ಕಾರ್ಮಿಕರೇ ಆಗಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು ಅಭಯ ಪಾಟಿಲ್ ನೇಕಾರ ಸಮ್ಮಾನ, ಜವಳಿ ನೀತಿ, ನೇಕಾರರ ಆತ್ಮಹತ್ಯೆ ಹಾಗೂ ಶಾಸಕರ ನೇತೃತ್ವದಲ್ಲಿ ಜವಳಿ ನೀತಿ ರೂಪಿಸಬೇಕು ಎಂದು ಸರ್ಕಾರದ ಗಮನಕ್ಕೆ ತಂದಿರುವುದು ಸ್ವಾಗತಾರ್ಹ ವಿಷಯವಾಗಿದೆ. ಆದರೆ, ನೇಕಾರಿಕೆಯಲ್ಲಿ ಮಾಲಿಕ ವರ್ಗ ಮತ್ತು ದುಡಿಯುವ ಕೂಲಿ ಕಾರ್ಮಿಕರ ವರ್ಗವಿದ್ದು, ಸರ್ಕಾರದ ಯೋಜನೆಗಳು ನೇಕಾರರ ಮಾಲೀಕ ವರ್ಗದವರ ಪಾಲಾಗುತ್ತಿದೆ. ಕೂಲಿ ಕೆಲಸ ಮಾಡುತ್ತಿರುವ ನೇಕಾರ ಕಾರ್ಮಿಕರಿಗೂ ಸರ್ಕಾರದ ಯೋಜನೆಗಳ ಲಾಭ ದೊರಕಿಸುವ ನಿಟ್ಟಿನಲ್ಲಿ ಅಧಿವೇಶನದ ಉಳಿದ ದಿನಗಳಲ್ಲಿ ಚರ್ಚೆ ಮಾಡಬೇಕು ಎನ್ನುವುದು ನೇಕಾರ ಕೂಲಿ ಕಾರ್ಮಿಕರ ಒತ್ತಾಯವಾಗಿದೆ.
ಬೆಳಗಾವಿ ಜಿಲ್ಲೆಯ ನೇಕಾರ ಕೂಲಿ ಕಾರ್ಮಿಕರ ಮುಖಂಡರಾದ ಶಂಕರ ಢವಳಿ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ನೇಕಾರಿಕೆ ಮಗ್ಗದಲ್ಲಿ ಕೂಲಿ ಕೆಲಸ ಮಾಡುವ ನೇಕಾರ ಕಾರ್ಮಿಕರನ್ನು ಸರ್ಕಾರವು ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಬೆಳಗಾವಿ ಅಧಿವೇಶನದಲ್ಲಿ ನೇಕಾರರ ಸಮಸ್ಯೆಗಳ ಕುರಿತು ಶಾಸಕರಾದ ಅಭಯ ಪಾಟಿಲ್ ಅವರು ಚರ್ಚೆ ಮಾಡಿದ್ದಾರೆ. ಆದರೆ ಸರ್ಕಾರಕ್ಕೆ ನೇಕಾರ ಮಾಲೀಕರು ಮತ್ತು ನೇಕಾರ ಕೂಲಿ ಕಾರ್ಮಿಕ ವರ್ಗಗಳಲ್ಲಿ ವ್ಯತ್ಯಾಸವಿದೆ ಎಂಬುದು ತಿಳಿಯಬೇಕು” ಎಂದು ತಿಳಿಸಿದ್ದಾರೆ.
“ಸರ್ಕಾರವು ನೇಕಾರರ ಹೆಸರಿನಲ್ಲಿ ಜಾರಿ ಮಾಡುವ ಯೋಜನೆಗಳ ಲಾಭ ಮಗ್ಗದ ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದ್ದು, ಅವರ ಕೈ ಕೆಳಗೆ ಕೆಲಸ ಮಾಡುವ ನೇಕಾರ ಕೂಲಿ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಲಾಭ ದೊರಕುತ್ತಿಲ್ಲ ಹಾಗೂ ಬ್ಯಾಂಕುಗಳಲ್ಲಿ ಸರಿಯಾದ ಸಾಲ ಸೌಲಭ್ಯಗಳಿಲ್ಲ. ಈ ಹಿಂದೆ ಸರ್ಕಾರ ನೇಕಾರ ಸಾಲ ಮನ್ನಾ ಮಾಡಿದಾಗ ನೇಕಾರ ಮಾಲೀಕರ ಸಾಲ ಮನ್ನಾ ಆಗಿದೆ. ಆದರೆ ಕೂಲಿ ಕಾರ್ಮಿಕರ ಸಾಲ ಮನ್ನಾ ಆಗಲಿಲ್ಲ. ಇದರಿಂದಾಗಿ ನೇಕಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನೇಕಾರ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಹೊರತು ಮಾಲೀಕರಲ್ಲ” ಎನ್ನುವುದು ಇವರ ವಾದ.

“ಪ್ರತಿನಿತ್ಯ ಮುಂಜಾನೆಯಿಂದ ರಾತ್ರಿವರೆಗೂ ದುಡಿದರೆ ಸಿಗುವುದು 450 ರೂಪಾಯಿಗಳವರೆಗೆ ಮಾತ್ರ. ಇಷ್ಟು ಕೂಲಿಯಲ್ಲಿ ಬದುಕು ಸಾಗಿಸುವುದು ಕಷ್ಟದ ಕೆಲಸವಾಗಿದೆ. ರಾಜ್ಯದಲ್ಲಿ ಬಹಳಷ್ಟು ಕಾರ್ಮಿಕರಿಗೆ ಸ್ವಂತ ಮನೆಗಳಿಲ್ಲ. ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುವುದಾಗಿ ಸರ್ಕಾರವು ಹೇಳಿದೆ. ಆದರೆ ಅರ್ಜಿ ಹಾಕಿದರೂ ಸಹ ಇದುವರೆಗೂ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಚಳಿಗಾಲದ ಅಧಿವೇಶನದ ಉಳಿದ ದಿನಗಳಲ್ಲಿ ನೇಕಾರಿಕೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಕುರಿತು ಚರ್ಚೆ ಮಾಡಿ ಸಂಕಷ್ಟದಲ್ಲಿರುವ ಕಾರ್ಮಿಕರ ಬಗ್ಗೆ ಚರ್ಚಿಸಿ ಜವಳಿ ಸಚಿವರು ನೇಕಾರ ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕಿದೆ” ಎಂದು ಹೇಳಿದ್ದಾರೆ.
ಗದಗ ಜಿಲ್ಲೆಯ ನೇಕಾರ ಮುಖಂಡರಾದ ಬಸವರಾಜ ಮುರಗೋಡ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ಅಧಿವೇಶನದಲ್ಲಿ ನೇಕಾರರ ಕುರಿತು ಚರ್ಚೆಯಾಗಿದೆ. ಆದರೆ ನೇಕಾರ ಮಾಲೀಕರು ಕೂಲಿ ಕಾರ್ಮಿಕರನ್ನು ಸೇರಿಸಿಕೊಂಡು ಹೋರಾಟ ಮಾಡುತ್ತಾರೆ. ಆದರೆ ಮಾಲೀಕರು ದುಡಿಯುವ ಕೂಲಿ ಕಾರ್ಮಿಕರನ್ನು ದಾಖಲೆಗಳಲ್ಲಿ ಗುರುತಿಸುವುದಿಲ್ಲ. ಇದರಿಂದಾಗಿ ಸರ್ಕಾರವು ಮಾಲೀಕರನ್ನು ಮಾತ್ರ ನೇಕಾರರು ಎಂದುಕೊಂಡಿದೆ. ಸರ್ಕಾರಕ್ಕೆ ನಿಜವಾದ ನೇಕಾರರು ಯಾರು ಎಂಬುದನ್ನು ಗಮನಕ್ಕೆ ತರಬೇಕಾಗಿದೆ” ಎಂದು ಹೇಳಿದರು.
“ಮಾಲೀಕರು ಕೂಲಿ ಕಾರ್ಮಿಕರ ಹಾಜರಾತಿ ಇಟ್ಟುಕೊಳ್ಳಬೇಕು. ಎ.ಬಿ.ಸಿ ರಿಜಿಸ್ಟರ್ ಮೆಂಟೈನ್ ಮಾಡಬೇಕು. ಕೈಗಾರಿಕಾ ಇಲಾಖೆಗಳಲ್ಲಿ ಕಾರ್ಮಿಕರ ಹೆಸರನ್ನು ನೋಂದಣಿ ಮಾಡಿಸಬೇಕು. ಆದರೆ ನೋಂದಣಿ ಮಾಡುತ್ತಿಲ್ಲ. ವೇತನ ಕೂಡ ಸರಿಯಾಗಿ ಪಾವತಿ ಮಾಡುವುದಿಲ್ಲ. ನಿಜವಾದ ಅರ್ಥದಲ್ಲಿ ಮಾಲೀಕರೇ ಕೂಲಿ ಕಾರ್ಮಿಕರನ್ನು ತುಳಿಯುತ್ತಿದ್ದಾರೆ. ಇಲ್ಲಿ ಕಾರ್ಮಿಕರು ಮತ್ತು ಅಧಿಕಾರಿಗಳು ಇಬ್ಬರೂ ಶಾಮೀಲಾಗಿದ್ದಾರೆ. ಈ ಕುರಿತು ಮಾಲೀಕರಿಗೆ ಪ್ರಶ್ನಿಸಿದರೆ ಕೆಲಸದಿಂದ ತೆಗೆದು ಹಾಕುವ ಭಯ ಕಾರ್ಮಿಕ ವರ್ಗದ್ದಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ವರ್ಷಗಳ ತಿಕ್ಕಾಟಕ್ಕೆ ಮುಕ್ತಿ: ಮಂಗಳೂರಿನಿಂದ ಕಾರ್ಕಳ, ಮೂಡಬಿದ್ರಿ ಮಾರ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ
“ಕಾರ್ಮಿಕ ಎಂದು ಹೇಳಿಕೊಳ್ಳಲು ನೇಕಾರ ಕೂಲಿ ಕಾರ್ಮಿಕರಿಗೆ ಯಾವುದೇ ದಾಖಲೆಗಳಿಲ್ಲ. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 46 ಜನರು ನೇಕಾರರು ಕೂಲಿ ಕಾರ್ಮಿಕರೇ ಆಗಿದ್ದಾರೆ. ಕಾರ್ಮಿಕರ ಹೆಸರಿನಲ್ಲಿ ಮಾಲೀಕರು ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಸರಿಯಾದ ಮಾಹಿತಿ ಸಿಗದೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ. ನಿಜವಾದ ಅರ್ಥದಲ್ಲಿ ನೇಕಾರರು ಅಂದರೆ ಯಾರು ಮಗ್ಗದ ಮಾಲೀಕರಾ ಅಥವಾ ನೇಕಾರಿಕೆ ಕೆಲಸ ಮಾಡುವ ಕೂಲಿ ಕಾರ್ಮಿಕರಾ ಎನ್ನುವುದನ್ನು ಅಧಿವೇಶನದಲ್ಲಿ ಸರ್ಕಾರಕ್ಕೆ ಸ್ಪಷ್ಟಪಡಿಸಬೇಕಿದೆ” ಎಂದು ಬಸವರಾಜ ಮುರಗೋಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಮಂಜುನಾಥ ಚೋಪಡಿ ನೇಕಾರ ಕೂಲಿ ಕಾರ್ಮಿಕನ ಕುಟುಂಬದ ಸದಸ್ಯರು ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ನೇಕಾರ ಕೂಲಿ ಕೆಲಸ ಮಾಡುತ್ತಿದ್ದ ಕೂಲಿ ಹಣವು ಕುಟುಂಬ ಸಾಗಿಸಲು ಸಾಲುತ್ತಿರಲಿಲ್ಲ. ಆದ್ದರಿಂದ ಅನೇಕ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರದಿಂದ ಇದುವರೆಗೂ ಪರಿಹಾರ ಬಂದಿಲ್ಲ. ನೇಕಾರ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಕೂಲಿ ನೇಕಾರರ ಕುರಿತು ವಿಸ್ತೃತವಾಗಿ ಚರ್ಚಿಸಿ ಸ್ಪಂದಿಸಲಿ” ಎಂದು ಆಗ್ರಹಿಸಿದ್ದಾರೆ.
ನೇಕಾರ ಅಭಿವೃದ್ದಿ ನಿಗಮ ಸ್ಥಾಪನೆಗೆ ಸರ್ಕಾರದ ಆದೇಶವಾಗಿದ್ದು, ಇನ್ನೂ ಕಾರ್ಯ ಆರಂಭಿಸಿಲ್ಲ. ನೇಕಾರ ಅಭಿವೃದ್ದಿ ನಿಗಮವು ಮಾಲೀಕರಷ್ಟೆ ಅಲ್ಲದೆ ನೇಕಾರ ಕೂಲಿ ಕಾರ್ಮಿಕರನ್ನು ಒಳಗೊಳ್ಳಬೇಕಿದೆ. ನೇಕಾರರಿಗೆ ಪ್ರತ್ಯೇಕ ವಿಮಾ ಯೋಜನೆ ಘೋಷಿಸಬೇಕು ಎಂದು ಅಧಿವೇಶನದಲ್ಲಿ ಅಭಯ ಪಾಟಿಲ್ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಯೋಜನೆಯಲ್ಲಿ ನೇಕಾರ ಕೂಲಿ ಕಾರ್ಮಿಕರಿಗೂ ವಿಮೆ ನೀಡಬೇಕು, ಮೆಟ್ರಿಕ್ ಪೂರ್ವ ಮತ್ತು ಉನ್ನತ ಶಿಕ್ಷಣಕ್ಕೆ ಸೌಲಭ್ಯ ನೀಡುವ ಕುರಿತು ತಿಳಿಸಿದ್ದು, ನೇಕಾರ ಮಾಲೀಕರ ಮಕ್ಕಳ ಜೊತೆಗೆ ನೇಕಾರ ಕಾರ್ಮಿಕರ ಮಕ್ಕಳಿಗೂ ಸೌಲಭ್ಯ ನೀಡಬೇಕಿದೆ.
ಜೊತೆಗೆ, ನೇಕಾರ ಸಮ್ಮಾನ ಯೋಜನೆಯಲ್ಲಿ ಲೋಪಗಳಿದ್ದು, ಅದನ್ನು ಸರಿಪಡಿಸಬೇಕು. ಸರ್ಕಾರವು ರೂಪಿಸಲಿರುವ ಹೊಸ ಜವಳಿ ನೀತಿಯೂ ನೇಕಾರ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ರೂಪಿಸಬೇಕು ಮತ್ತು ನೇಕಾರಿಕೆ ಅಭಿವೃದ್ಧಿಗಾಗಿ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳಲ್ಲಿ ನೇಕಾರ ಕೂಲಿ ಕಾರ್ಮಿಕರಿಗೆ ಲಾಭ ತಂದು ಕೊಡಬೇಕು ಎನ್ನುವುದು ರಾಜ್ಯದ ನೇಕಾರ ಕೂಲಿ ಕಾರ್ಮಿಕರ ಪರವಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳ ಮುಖಂಡರ ಒತ್ತಾಯವಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು