ಪ್ರಯಾಗ್‌ರಾಜ್ ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ದುರ್ಮರಣ ಹೊಂದಿದ ಬೆಳಗಾವಿಯ ನಾಲ್ವರ ಕುಟುಂಬಸ್ಥರಿಗೆ ಉತ್ತರಪ್ರದೇಶ ಸರ್ಕಾರ ತಲಾ ₹25 ಲಕ್ಷ ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಪ್ರಯಾಗ್‌ರಾಜ್ ಜಿಲ್ಲಾಧಿಕಾರಿ ರವಿ ಮಂದರ್ ಅವರ ಜತೆಗೆ ಮಾತುಕತೆ ನಡೆಸಿ ಮೃತರಾದ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಮಹಾದೇವಿ ಬಾವನೂರ, ಅರುಣ ಕೋಪರ್ಡೆ ಅವರ ಕುಟುಂಬಸ್ಥರ ಖಾತೆಗಳಿಗೆ ನೇರವಾಗಿ ಪರಿಹಾರ ಧನ ಜಮೆಯಾಗಿದೆ. ನಾವು ಗ್ರಾಮಲೆಕ್ಕಾಧಿಕಾರಿ ಮೂಲಕ ಪರಿಶೀಲಿಸಿದ್ದೇವೆ” ಎಂದರು.
“ಮೃತದೇಹಗಳ ವರದಿಯಲ್ಲಿ ಒಂದಿಬ್ಬರ ಹೆಸರಿನಲ್ಲಿ ಅಕ್ಷರದೋಷ ಕಂಡು ಬಂದಿರುವ ಕುರಿತು ಮೃತರ ಕುಟುಂಬಸ್ಥರು ತಿಳಿಸಿದ್ದರು. ಹಾಗಾಗಿ, ಅದನ್ನು ಅನುಮೋದಿಸಿ, ಸರಿಪಡಿಸಿ ಹೆಸರುಗಳನ್ನು ಪ್ರಯಾಗ್‌ರಾಜ್ ಜಿಲ್ಲಾಧಿಕಾರಿಗಳಿಗೆ ವಾಟ್ಸ್ಆ್ಯಪ್ ಮತ್ತು ಮೇಲ್ ಮೂಲಕ ಕಳಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಮರಣೋತ್ತರ ವರದಿ ಮತ್ತು ಮರಣ ಪ್ರಮಾಣಪತ್ರವನ್ನು ಕಳುಹಿಸಿಕೊಡುವ ಬಗ್ಗೆ ಪ್ರಯಾಗ್‌ರಾಜ್ ಜಿಲ್ಲಾಡಳಿತ ನಮಗೆ ಭರವಸೆ ನೀಡಿದೆ” ಎಂದು ಮೊಹಮ್ಮದ್ ರೋಷನ್ ಇದೇ ವೇಳೆ ಸ್ಪಷ್ಟಪಡಿಸಿದರು.
ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಎರಡು ಬಸ್ಗಳಲ್ಲಿ ಬೆಳಗಾವಿಯ 60 ಮಂದಿ ಜನವರಿ 26ರಂದು ಪ್ರಯಾಗ್ರಾಜ್ಗೆ ತೆರಳಿದ್ದರು. ಇವರಲ್ಲಿ ನಾಲ್ವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದು, ಉಳಿದ 56 ಮಂದಿ ಸುರಕ್ಷಿತವಾಗಿರುವುದಾಗಿ ಅಂದೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ದಿಗಂತ್ ನಾಪತ್ತೆ ಪ್ರಕರಣ: ಬಿಜೆಪಿ ಶಾಸಕ ಭರತ್ ಶೆಟ್ಟಿ, ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
“ಟ್ರಾವೆಲ್ಸ್‌ನವರು ಊಟ, ಉಪಹಾರ ಸೇರಿ ಎಲ್ಲ ವ್ಯವಸ್ಥೆಯನ್ನು ಒಳ್ಳೆಯ ರೀತಿ ಮಾಡಿದ್ದಾರೆ. ನಮ್ಮ ವಾಹನ ಪ್ರಯಾಗ್ರಾಜ್ನಿಂದ 30-40 ಕಿಮೀ ದೂರದಲ್ಲಿತ್ತು. ಹಾಗಾಗಿ, ಗುಂಪುಗಳನ್ನಾಗಿ ವಿಂಗಡಿಸಿ 2 ಗಂಟೆಯೊಳಗೆ ನದಿಯಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ್ದರು. ಅದೇ ರೀತಿ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನಕ್ಕೆಂದು 9 ಜನರ ಗುಂಪು ತೆರಳಿತ್ತು. ಆ ವೇಳೆ ಏಕಾಏಕಿ ಕಾಲ್ತುಳಿತ ಉಂಟಾಗಿ ನಾಲ್ಕು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಾಯಿರಥ ಟ್ರಾವೆಲ್ಸ್ನವರದ್ದು ಯಾವುದೇ ತಪ್ಪಿಲ್ಲ, ಸುರಕ್ಷಿತವಾಗಿ ಹೋಗಿ ವಾಪಸ್ ಬಂದು ಬಸ್ ಹತ್ತುವಂತೆ ಅವರು ಮೊದಲೇ ನಮಗೆ ತಿಳಿಸಿದ್ದರು” ಎಂದು 56 ಜನರಿದ್ದ ತಂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿತ್ತು.
ಆರಂಭದಲ್ಲಿ ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಟ(50) ಮತ್ತು ಪುತ್ರಿ ಮೇಘಾ ಹತ್ತರವಾಟ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದಾದ ಬಳಿಕ ಪತ್ನಿ ಜತೆಗೆ ಪ್ರಯಾಗ್ರಾಜ್ಗೆ ತೆರಳಿದ್ದ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಮೃತಪಟ್ಟಿರುವ ಮಾಹಿತಿ ಬಂದಿತ್ತು.