ಲೋಕಾಪೂರ-ರಾಮದುರ್ಗ-ಸವದತ್ತಿ-ಧಾರವಾಡ ರೈಲ್ವೆ ಮಾರ್ಗ ಕೇವಲ ಬೆಳಗಾವಿ ಜಿಲ್ಲೆಯ ಜನರಿಗಷ್ಟೇ ಅಲ್ಲದೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ರಾಜ್ಯ ಮತ್ತು ಅಂತಾರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುವ ಭಕ್ತರ ಬಹುದಿನಗಳ ಬೇಡಿಕೆಯಾಗಿದೆ.
ಈ ಮೊದಲು ರೈಲ್ವೆ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ಇದನ್ನು ಸ್ಥಗಿತಗೊಳಿಸಿದೆ. ಲೋಕಾಪೂರ-ರಾಮದುರ್ಗ-ಸವದತ್ತಿ-ಧಾರವಾಡ ರೈಲ್ವೆ ಮಾರ್ಗ ಸ್ಥಾಪನೆಯಾಗಬೇಕು ಎಂಬುದು ಬೆಳಗಾವಿ ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಈ ಬೇಡಿಕೆ ಈಡೇರುವುದೇ ಎನ್ನುವ ನೀರಿಕ್ಷೆಯಲ್ಲಿ ಈ ಭಾಗದ ಜನರು ಕಾದು ಕುಳಿತಿದ್ದಾರೆ.
ಬಾಗಲಕೋಟೆ-ಕುಡಚಿ ಮಾರ್ಗದ ₹986 ಕೋಟಿ ಮೊತ್ತದ ಯೋಜನೆಗೆ 2010ರಲ್ಲಿ ಅನುಮೋದನೆ ಸಿಕ್ಕಿದ್ದು, ₹1,530 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಬಾಗಲಕೋಟೆಯಿಂದ ಲೋಕಾಪೂರವರೆಗಿನ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಈ ಕಾರಣದಿಂದ ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮಾರ್ಗವಾಗಿ ಧಾರವಾಡದವರೆಗೆ ರೈಲ್ವೆ ಮಾರ್ಗ ನಿರ್ಮಾಣವಾಗಬೇಕು ಎನ್ನುವುದು ಈ ಭಾಗದ ರೈಲ್ವೆ ಹೋರಾಟಗಾರರ ಬೇಡಿಕೆಯಾಗಿದೆ.
2016 ಮತ್ತು 2017ರಲ್ಲಿ ಈಭಾಗದ ರೈಲ್ವೆ ಯೋಜನೆಯ ಸಮಿಕ್ಷೆಯಾಗಿದ್ದು, 2019ರಲ್ಲಿ ಕ್ರಿಯಾ ಯೋಜನೆಯನ್ನೂ ಮಾಡಿದ್ದರು. ಆದರೆ ಈ ಮಾರ್ಗದಲ್ಲಿ ಜನದಟ್ಟಣೆ ಇಲ್ಲ ಈ ಯೋಜನೆ ಆರ್ಥಿಕವಾಗಿ ಫಲ ನೀಡುವದಿಲ್ಲವೆಂಬ ನೆಪವೊಡ್ಡಿ ವರದಿ ನೀಡಿದ್ದರಿಂದ ಈ ಯೋಜನೆ ನನನೆಗುದ್ದಿಗೆ ಬಿದ್ದಿದೆ. ಆದರೆ ಸವದತ್ತಿ ಮತ್ತು ರಾಮದುರ್ಗ ರೈಲ್ವೆ ಹೋರಾಟಗಾರರು ಸವದತ್ತಿ ಯಲ್ಲಮ್ಮದೆವಿ ದೇವಸ್ಥಾನಕ್ಕೆ ರಾಜ್ಯ ಮತ್ತು ಅಂತಾರಾಜ್ಯದ ಬೇರೆ ಬೇರೆ ಭಾಗಗಳಿಂದ ಕೋಟ್ಯಂತರ ಜನರು ಬರುತ್ತಾರೆ. ಅಲ್ಲದೆ ಶಿರಸಂಗಿ ಕಾಳಮ್ಮದೇವಿ ದೇವಸ್ಥಾನಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಾರೆ ಹಾಗೂ ಧಾರವಾಡ ಈ ಭಾಗದ ಶಿಕ್ಷಣದ ಪ್ರಮುಖ ಕೇಂದ್ರವಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಈ ಭಾಗದಿಂದ ಧಾರವಾಡಕ್ಕೆ ಹೋಗುತ್ತಾರೆ. ಧಾರವಾಡದ ಹೈಕೋರ್ಟ್‌ಗೆ ಹೋಗವುದಕ್ಕೆ ಇಲ್ಲಿನ ಜನರು ಬಸ್ ಅವಲಂಬಿಸಬೇಕಾಗಿದೆ. ಆದ್ದರಿಂದ ಈ ಮಾರ್ಗವು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಆದಷ್ಟು ಬೇಗ ಈ ಭಾಗದ ರೈಲ್ವೆ ಮಾರ್ಗ ನಿರ್ಮಾಣವಾಗಬೇಕೆಂದು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ.
ರಾಮದುರ್ಗ ಮತ್ತು ಸವದತ್ತಿಯಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ರಾಜಾಧ್ಯಕ್ಷ ಕುತುಬ್ ಉದ್ದಿನ್ ಖಾಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದಾರೆ.
ರಾಮದುರ್ಗ ವಿಧಾನಸಭಾ ಶಾಸಕ ಅಶೋಕ ಪಟ್ಟಣ ಈ ದಿನ.ಕಾಮ್ ಜತೆಗೆ ಮಾತನಾಡಿ, “ರೈಲ್ವೆ ಹೋರಾಟ ಸಮಿತಿಯವರು ನಮ್ಮನ್ನು ಭೇಟಿ ಮಾಡಿದ್ದು, ಮುಖ್ಯಮಂತ್ರಿಗಳ ಭೇಟಿ ಮಾಡಲು ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆಬ್ರವರಿ ಎರಡನೇ ವಾರದಲ್ಲಿ ರೈಲ್ವೆ ಹೋರಾಟಗಾರರಿಗೆ ಭೇಟಿಗೆ ಸಮಯ ನೀಡುವುದಾಗಿ ತಿಳಿಸಿದ್ದು, ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಮತ್ತು ಕೇಂದ್ರದ ರಾಜ್ಯ ರೈಲ್ವೆ ಸಚಿವ ಸೋಮಣ್ಣನವರು, ʼರಾಜ್ಯ ಸರ್ಕಾರ ಭೂಮಿ ನೀಡಿದರೆ ಕೇಂದ್ರ ಸರ್ಕಾರದ ಮೂಲಕ ಲೋಕಾಪೂರ-ರಾಮದುರ್ಗ-ಸವದತ್ತಿ-ಧಾರವಾಡ ರೈಲ್ವೆ ಮಾರ್ಗಕ್ಕೆ ಅನುದಾನದ ಸಹಾಯ ಮಾಡುವೆವುʼ ಎಂದು ತಿಳಿಸಿದ್ದಾರೆ. ಈ ಭಾಗದ ರೈಲ್ವೆ ಹೋರಾಟಗಾರರನ್ನು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸಿ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದರು.
ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಗೈಬು ಜೈನೆಖಾನ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ನವೆಂಬರ್ 12ರಂದು ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಬೃಹತ್ ಚಳವಳಿ ಮಾಡಿ ಲೋಕಸಭಾ ಸದಸ್ಯರಿಗೆ, ಕೆಂದ್ರ ರೈಲ್ವೆ ಸಚಿವರಿಗೆ ಹಾಗೂ ರಾಜ್ಯ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಸ್ಥಳೀಯ ಶಾಸಕರು ಸಚಿವ ಸೋಮಣ್ಣನವರ ಗಮನಕ್ಕೆ ತಂದಿದ್ದಾರೆ. ನಾವು ಸಚಿವರನ್ನು ಭೇಟಿ ಮಾಡಿದಾಗ ಸಚಿವರು ರಾಜ್ಯ ಸರ್ಕಾರ ಭೂಮಿ ನೀಡಿದರೆ ಕೇಂದ್ರ ಸರ್ಕಾರದ ಸಹಾಯದೊಂದಿಗೆ ನಿಮ್ಮ ಬೇಡಿಕೆ ಈಡೇರಿಸುತ್ತೆವೆಂದು ತಿಳಿಸಿದ್ದಾರೆ. ರೈಲ್ವೆ ಕುತುಬ್ ಉದ್ದೀನ್ ಖಾಜಿಯವರು ಸವದತ್ತಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಿ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಈ ರೈಲು ಮಾರ್ಗ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದ್ದು, ಸರ್ಕಾರಕ್ಕೂ ಆದಾಯ ತಂದುಕೊಡಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷ; ಶತಮಾನೋತ್ಸವ ಸಂಭ್ರಮಕ್ಕೆ ಸ್ಥಳೀಯರ ಕಾತರ
ರೈಲ್ವೆ ಕ್ರಿಯಾ ಹೋರಾಟ ಸಮಿತಿಯ ಹೋರಾಟಗಾರ ಪ್ರದೀಪ ಪಟ್ಟಣ ಈ ದಿನ.ಕಾಮ್ ಜತೆಗೆ ಮಾತನಾಡಿ, “ರಾಮದುರ್ಗ ಮತ್ತು ಸವದತ್ತಿ ಶಾಸಕರು ಈ ಬಗ್ಗೆ ಚರ್ಚೆ ಮಾಡಿದ್ದು, ಅಶೋಕ ಪಟ್ಟಣವರು ಸೋಮಣ್ಣನವರ ಜತೆಗೆ ಮಾತನಾಡಿದ್ದಾರೆ. ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟಗಾರ ಕುತುಬ್ ಉದ್ದೀನ್ ಖಾಜಿಯವರು ನಮ್ಮ ಜೊತೆ ಇದ್ದಾರೆ ಹಾಗೂ ಸವದತ್ತಿ ಯಲ್ಲಮ್ಮ ದೆವಸ್ಥಾನಕ್ಕೆ, ಶಬರಿ ಕೊಳಕ್ಕೆ, ಶಿವನ ಮೂರ್ತಿ ವೀಕ್ಷಣೆಗೆ ಬರುವ ಲಕ್ಷಾಂತರ ಜನರಿಗೆ ಈ ರೈಲ್ವೆ ಮಾರ್ಗದಿಂದ ಅನುಕೂಲವಾಗಲಿದೆ. ಶಾಸಕರು, ಸಚಿವರು, ಲೋಕಸಭಾ ಸದಸ್ಯರು ಸೇರಿ ಚರ್ಚೆ ಮಾಡಿ ಈ ರೈಲ್ವೆ ಮಾರ್ಗದ ನಿರ್ಮಾಣದ ಬೇಡಿಕೆ ಈಡೇರಿಸುವ ಭರವಸೆಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಬೇರೆ ಬೇರೆ ಜಿಲ್ಲೆಯ ಭಕ್ತಾದಿಗಳು, “ಆದಷ್ಟು ಬೇಗನೆ ಲೋಕಾಪೂರ ರಾಮದುರ್ಗ, ಸವದತ್ತಿ, ಧಾರವಾಡ ರೈಲ್ವೆ ಮಾರ್ಗ ನಿರ್ಮಾಣವಾಗಬೇಕು. ಇದರಿಂದ ಸಮಯ ಮತ್ತು ಹಣ ಉಳಿಯುತ್ತದೆ ಹಾಗೂ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ” ಎಂದು ಈ ದಿನ.ಕಾಮ್ ಮೂಲಕ ಒತ್ತಾಯಿಸಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು