ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ತಾಯಂದಿರು ಮತ್ತು ಶಿಶುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿನ ಕೊರತೆಗಳ ಬಗ್ಗೆ ಆತಂಕ ಹುಟ್ಟಿಸುತ್ತಿವೆ. ಇತ್ತೀಚೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ತಾಯಂದಿರು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಔಷಧ ನಿಯಂತ್ರಕರನ್ನು ಅಮಾನತು ಮಾಡಲಾಗಿದೆ. ತನಿಖೆ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಕಳೆದ ಆರು ತಿಂಗಳೊಳಗೆ ಒಟ್ಟು 322 ನವಜಾತ ಶಿಶುಗಳು ಮತ್ತು 29 ತಾಯಂದಿರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ಪ್ರಭಾರಿ ಆರೋಗ್ಯಾಧಿಕಾರಿ ಶರಣಪ್ಪ ನೀಡಿರುವ ಮಾಹಿತಿ ಪ್ರಕಾರ, 2024ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಇರುವುದು, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಸೇರಿದಂತೆ ನಾನಾ ಕಾರಣಗಳಿಂದಾಗಿ 29 ಮಂದಿ ತಾಯಂದಿರುವ ಸಾವನ್ನಪ್ಪಿದ್ದಾರೆ. ಹಲವು ಕಾರಣದಿಂದ ಬಾಣಂತಿಯರು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿಯೇ 172 ನವಜಾತ ಶಿಶುಗಳು ಮೃತಪಟ್ಟಿದ್ದರೆ, ಉಳಿದ ಆಸ್ಪತ್ರೆಗಳಲ್ಲಿ 150 ಶಿಶುಗಳು ಸಾವನ್ನಪ್ಪಿದ್ದಾರೆ. ಕಡಿಮೆ ತೂಕ, ಬೆಳವಣಿಗೆಯಲ್ಲಿ ಕುಂಠಿತ, ಚಿಕಿತ್ಸೆ ಕೊರತೆ, ನ್ಯುಮೋನಿಯಾ, ಉಸಿರುಗಟ್ಟುವಿಕೆ ಹಾಗೂ ಅಪೌಷ್ಟಿಕತೆಯಿಂದ ಶಿಶುಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ದಾವಣಗೆರೆ ಜಿಲ್ಲೆಯಲ್ಲಿಯೂ ಕಳೆದ 7 ತಿಂಗಳಲ್ಲಿ 125 ನವಜಾತ ಶಿಶುಗಳು ಮತ್ತು 28 ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಅತೀ ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.