ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ವೃದ್ಧ ಅಪ್ಪಾಸಾಬ ಭೀಮಾ ನಾಯಿಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಖಡಕಲಾಟ ಪೊಲೀಸರು ಬಂಧಿಸಿದ್ದಾರೆ.
ವಾಳಕಿ ಗ್ರಾಮ ನಿವಾಸಿಗಳಾದ ಸಂತೋಷ ಪರಶರಾಮ ನಾಯಿಕ(30), ಹೊಳೆಪ್ಪಾ ಅಲಿಯಾಸ್ ಬಚ್ಚನ ಮಾರುತಿ ಘಸ್ತಿ(23) ಮತ್ತು ಮಹೇಶ ಸುರೇಶ ಬೇರಡ(20) ಬಂಧಿತ ಆರೋಪಿಗಳು.
ನಮ್ಮ ತಂದೆ ಅಪ್ಪಾಸಾಬ ಭೀಮಾ ನಾಯಿಕ(64) ಕಾಣೆಯಾಗಿದ್ದಾರೆ ಎಂದು ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮದ ಕಾಕಾಸಾಹೇಬ ಅಪ್ಪಾಸಾಬ ನಾಯಿಕ ಅವರು ಸಮೀಪದ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 11ರಂದು ದೂರು ದಾಖಲಿಸಿದ್ದರು.
ಜನವರಿ 9ರಂದು ಕಾಕಾಸಾಹೇಬ ಅವರು ಮತ್ತೆ ಠಾಣೆಗೆ ಬಂದು, ಮೂವರು ಸೇರಿ ನನ್ನ ತಂದೆಯನ್ನು ಕೊಲೆ ಮಾಡಿ ಶವವನ್ನು ಮಹಾರಾಷ್ಟ್ರದ ಫೋಂಡಾ ಘಾಟ್‌ನಲ್ಲಿ ಎಸೆದಿದ್ದಾರೆಂದು ಪೊಲೀಸರಿಗೆ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಅಂಗನವಾಡಿಗೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಆರೋಪಿ ಸಂತೋಷ ಪರಶರಾಮ ನಾಯಿಕ ಸಾರಾಯಿ ಕುಡಿದು ಅಮಲಿನಲ್ಲಿ ಕೊಲೆಯ ಮಾಹಿತಿಯನ್ನು ವಾಳಕಿ ಗ್ರಾಮದ ಕೆಂಪಣ್ಣ ನಾಯಿಕ ಅವರ ಮುಂದೆ ಹೇಳಿದ್ದಾನೆಂದು ಕಾಕಾಸಾಹೇಬ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳೀಯ ಸಿಪಿಐ ಬಿ ಎಸ್ ತಳವಾರ ನೇತೃತ್ವದಲ್ಲಿ ಖಡಕಲಾಟ ಠಾಣೆಯ ಪ್ರಭಾರ ಪಿಎಸ್‌ಐ ಬಿ ಕೆ ಪಾಟೀಲ, ಸ್ಥಳೀಯ ಗ್ರಾಮೀಣ ಪಿಎಸ್‌ಐ ಶಿವರಾಜ ನಾಯಿಕವಾಡಿ, ಸ್ಥಳೀಯ ಬಿಸಿಪಿಎಸ್ ಪಿಎಸ್‌ಐ ರಮೇಶ ಪವಾರ ಮತ್ತು ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶವದ ಕುರುಹುಗಳ ಬಗ್ಗೆ ಪೊಲೀಸರು ಪತ್ತೆ ಕಾರ್ಯ ಮುಂದುವರೆಸಿದ್ದಾರೆ.
