ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದ ರಥೋತ್ಸವದ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಬಾಲಕನೋರ್ಬ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಬಾಲಕನನ್ನು ಶಿವಾನಂದ ರಾಜಕುಮಾರ ಸಾವಳಗಿ (13) ಎಂದು ಗುರುತಿಸಲಾಗಿದೆ. ಶ್ರಾವಣ ಮಾಸದ ಪ್ರಯುಕ್ತ ಸಂಗಮೇಶ್ವರ ರಥೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ವೇಳೆ ಈ ಅವಘಡ ಸಂಭವಿಸಿದೆ.
ಈ ವರ್ಷ ಊರಿನ ಯುವಕರೆಲ್ಲ ಸೇರಿ 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲೆ 5 ಕೆಜಿ ತೂಕದ ಬೆಳ್ಳಿಯ ನವಿಲು ಮೂರ್ತಿಯನ್ನು ಜೋಡಿಸಿದ್ದರು. ಸಾವಿರ ವರ್ಷಗಳ ಇತಿಹಾಸಯುಳ್ಳ ಈ ಜಾತ್ರೆಯಲ್ಲಿ ಇದೇ ಮೊದಲ ಸಲ ಬೆಳ್ಳಿಯ ನವಿಲು ಪ್ರತಿಷ್ಠಾಪಿಸಲಾಗಿತ್ತು.

ಇದನ್ನು ಓದಿದ್ದೀರಾ? ಶಿವಮೊಗ್ಗ | ಚಾಲನೆಯ ವೇಳೆ ಮೊಬೈಲ್ ಬಳಸಿದ ಖಾಸಗಿ ಬಸ್ ಚಾಲಕ: ಬಿತ್ತು ಐದು ಸಾವಿರ ದಂಡ!
‘ರಥ ಸಂಚರಿಸಬೇಕಾದ ರಸ್ತೆ ಸಂಪೂರ್ಣ ತಗ್ಗು-ದಿನ್ನೆಗಳಿಂದ ಕೂಡಿದೆ. ದೇವಸ್ಥಾನದಿಂದ ತುಸು ದೂರ ಎಳೆದುಕೊಂಡು ತಂದ ಬಳಿಕ ರಥದ ಚಕ್ರಗಳು ತಗ್ಗಿನಲ್ಲಿ ಸಿಲುಕಿದೆ. ಜನರು ಜೋರಾಗಿ ರಥ ಎಳೆದಾಗ, ಅತ್ತಿತ್ತ ಹೊರಳಾಡಿದೆ. ಆಗ ಕಳಸದ ಮೇಲಿನ ಬೆಳ್ಳಿಯ ನವಿಲು ಕಿತ್ತು ಮೇಲಿನಿಂದ ಬಿದ್ದ ವೇಳೆ ರಥದ ಕೆಳಗಡೆ ಇದ್ದ ಬಾಲಕನ ತಲೆಯ ಮೇಲೆ ನೇರವಾಗಿ ಬಿದ್ದಿದೆ.
ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ರಥೋತ್ಸವವನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.
